ಈಗ ಎಲ್ಲಾ ಕಡೆ ಕಲುಷಿತ ವಾತಾವರಣವಿದೆ. ಉಸಿರಾಡಲು ಸ್ವಚ್ಛ ಗಾಳಿಯೇ ಸಿಕ್ತಿಲ್ಲ. ಹಾಗಾಗಿ ಶ್ವಾಸಕೋಶದ ತೊಂದರೆಗಳು ಹೆಚ್ಚಿವೆ. ಗಂಟಲು ನೋವು, ಉಸಿರಾಟದ ಸಮಸ್ಯೆ ಇವೆಲ್ಲ ಮಾಮೂಲಾಗಿಬಿಟ್ಟಿವೆ. ಹಾಗಾಗಿ ಪ್ರತಿಯೊಬ್ಬರೂ ಪುದೀನಾ ಚಹಾ ಸವಿಯೋದನ್ನ ಅಭ್ಯಾಸ ಮಾಡಿಕೊಳ್ಳೋದು ಒಳಿತು.
ಇದು ಆರೋಗ್ಯಕ್ಕೆ ಒಳ್ಳೆಯದು, ರುಚಿ ಕೂಡ ಚೆನ್ನಾಗಿರುತ್ತದೆ. ಪುದೀನಾ ಚಹಾ ಕುಡಿಯುವುದರಿಂದ ಅಲರ್ಜಿ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ. ಅಸ್ತಮಾ, ನೆಗಡಿ, ಕಣ್ಣುಗಳಲ್ಲಿ ತುರಿಕೆ ಹೀಗೆ ಯಾವುದೇ ರೀತಿಯ ಅಲರ್ಜಿ ನಿಮ್ಮಲ್ಲಿದ್ದರೂ ಅದನ್ನು ಪುದೀನಾ ಚಹಾ ಹೊಡೆದೋಡಿಸುತ್ತದೆ. ಯಾಕಂದ್ರೆ ಇದರಲ್ಲಿ ರೋಸ್ಮರಿನಿಕ್ ಆ್ಯಸಿಡ್ ಅಂಶ ಹೆಚ್ಚಾಗಿದೆ.
ಅಷ್ಟೇ ಅಲ್ಲ ಹೊಟ್ಟೆ ತೊಳಸುವಿಕೆ, ಗ್ಯಾಸ್ ಟ್ರಬಲ್, ಅಜೀರ್ಣದಂತಹ ಸಮಸ್ಯೆಗಳನ್ನು ಹೊಡೆದೋಡಿಸಲು ಇದು ರಾಮಬಾಣ. ಪುದೀನಾದಲ್ಲಿ ಕ್ಯಾಲೋರಿ ಇರುವುದಿಲ್ಲ, ಹಾಗಾಗಿ ತೂಕ ಇಳಿಸಲು ಸಹ ಇದು ನೆರವಾಗುತ್ತದೆ. ಇದರಲ್ಲಿ ಕೆಫೀನ್ ಅಂಶವಿಲ್ಲದ್ದರಿಂದ ಮಲಗುವ ಮುನ್ನ ಕುಡಿದರೆ ನಿಮಗೆ ಚೆನ್ನಾಗಿ ನಿದ್ದೆ ಬರುತ್ತದೆ.
ಬಹುತೇಕ ಎಲ್ಲ ಮಹಿಳೆಯರಲ್ಲೂ ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆ ನೋವು ಸಹಜ. ಅದಕ್ಕೂ ಸಹ ಪುದೀನಾ ಚಹಾವೇ ಮದ್ದು. ಇನ್ಫೆಕ್ಷನ್, ಬ್ಯಾಕ್ಟೀರಿಯಾ ಸಂಬಂಧಿತ ಖಾಯಿಲೆಗಳನ್ನೂ ಹೊಡೆದೋಡಿಸಬಲ್ಲ ಶಕ್ತಿ ಇದರಲ್ಲಿದೆ. ಇದನ್ನು ಮಾಡುವುದು ಕೂಡ ಬಹಳ ಸುಲಭ.
ಎರಡು ಕಪ್ ನೀರನ್ನು ಕುದಿಯಲು ಇಡಿ. ಅದಕ್ಕೆ 5-6 ಪುದೀನಾ ಎಲೆಗಳನ್ನು ಚೂರು ಮಾಡಿ ಹಾಕಿ. ನೀರು ಕುದಿ ಬಂದ ಬಳಿಕ ಗ್ಯಾಸ್ ಆಫ್ ಮಾಡಿ, ಒಂದು ಪ್ಲೇಟನ್ನು ಪಾತ್ರೆಗೆ ಮುಚ್ಚಿಡಿ. 5 ನಿಮಿಷದ ಬಳಿಕ ಪುದೀನಾ ಚಹಾವನ್ನು ಕುಡಿಯಿರಿ. ಬಿಸಿ ಬಿಸಿಯಾಗಿಯೇ ಅದನ್ನು ಸೇವಿಸುವುದು ಉತ್ತಮ.