ಪಶ್ಚಿಮ ಮಿಡ್ನಾಪುರ: ಪಶ್ಚಿಮ ಬಂಗಾಳದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅನೇಕ ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಆಸ್ತಿ-ಪಾಸ್ತಿಗಳು ನಾಶವಾಗಿದೆ. ರಸ್ತೆ ತುಂಬೆಲ್ಲಾ ನೀರು ನಿಂತಿದ್ದು, ಜನರು ದೋಣಿಯನ್ನು ಅವಲಂಬಿಸಿರುವ ದೃಶ್ಯ ಕಂಡು ಬಂದಿದೆ.
ಧಾರಾಕಾರ ಮಳೆಯಿಂದ ಉಂಟಾದ ಜಲಾವೃತವು ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿವೆ. ಜನರು ಪ್ರಯಾಣಿಸಲು ದೋಣಿಗಳನ್ನು ಬಳಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಶ್ಚಿಮ ಮಿಡ್ನಾಪುರದ ಘಾಟಲ್ ಉಪವಿಭಾಗದಲ್ಲಿ ರಸ್ತೆಗಳು ನೀರಿನಿಂದ ತುಂಬಿಹೋದ ಕಾರಣ ಹಲವಾರು ಜನರು ದೋಣಿಗಳನ್ನು ಬಳಸುತ್ತಿದ್ದಾರೆ. ಭಾರಿ ಮಳೆಯಿಂದಾಗಿ ಎರಡು ಜಿಲ್ಲೆಗಳ ಪ್ರದೇಶಗಳು ಜಲಾವೃತಗೊಂಡಿದ್ದರಿಂದ ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರದಲ್ಲಿ ಸುಮಾರು ಮೂರು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಪಶ್ಚಿಮ ಮಿಡ್ನಾಪುರದ ಸಬಾಂಗ್ ಪ್ರದೇಶವು ಹೆಚ್ಚು ಹಾನಿಗೊಳಗಾಗಿದೆ. ಕಳೆದ ವಾರದಿಂದ ಆರು ಸ್ಥಳಗಳಲ್ಲಿ ಕೆಲಘೈ ಮತ್ತು ಕಪಾಲೇಶ್ವರಿ ನದಿಗಳ ಒಡ್ಡುಗಳು ಒಡೆದಿವೆ. ಇದು ಪ್ರವಾಹದ ಹಾನಿಗೆ ಸಾಕ್ಷಿಯಾಗಿದೆ.
ದಕ್ಷಿಣ ಬಂಗಾಳದಲ್ಲಿ ಇನ್ನೂ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಮುನ್ಸೂಚನೆ ನೀಡಿದೆ. ಬುಧವಾರದವರೆಗೂ ದಕ್ಷಿಣ ಬಂಗಾಳದ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಿಂಚಿನೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕರಾವಳಿ 24 ಪರಗಣಗಳು, ಪುರ್ಬ ಮೇದಿನಿಪುರ ಮತ್ತು ಅದರ ಪಕ್ಕದ ಪಶ್ಚಿಮ ಮೇದಿನೀಪುರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.