ಬೆಂಗಳೂರು: ರಾಜ್ಯದಲ್ಲಿ ತಾಪಮಾನದಲ್ಲಿ ಇಳಿಕೆಯಾಗುತ್ತಿದ್ದು, ಮೈ ಕೊರೆಯುವ ಚಳಿಗೆ ಜನ ಗಡಗಡ ನಡುಗುವಂತಾಗಿದೆ. ಶೀತ ಗಾಳಿ ಬೀಸುತ್ತಿರುವ ಪರಿಣಾಮ ಚಳಿಯ ತೀವ್ರತೆ ಹೆಚ್ಚಾಗಿದೆ.
ರಾಜ್ಯದ ಆರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಶೀತದ ಅಲೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ.
ಮಳೆ, ಮೋಡ ಇಲ್ಲದ ಕಾರಣ ಶುಭ್ರ ಆಕಾಶ, ಕನಿಷ್ಠ ಉಷ್ಣಾಂಶದಲ್ಲಿ ಸುಮಾರು 5 ಡಿಗ್ರಿ ಸೆಲ್ಸಿಯಸ್ ನಷ್ಟು ಇಳಿಕೆ, ಉತ್ತರ ದಿಕ್ಕಿನಿಂದ ದಕ್ಷಿಣಕ್ಕೆ ಗಾಳಿ ಬೀಸುತ್ತಿರುವುದರಿಂದ ಉತ್ತರ ಒಳನಾಡಿನ ಆರು ಜಿಲ್ಲೆಗಳಲ್ಲಿ ಶೀತ ಅಲೆ ಕಾಣಿಸಿಕೊಂಡಿದೆ. ಹೀಗಾಗಿ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಯಾದಗಿರಿ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ರಾಜ್ಯದ ಬಹುತೇಕ ಭಾಗದಲ್ಲಿ ತೀವ್ರ ಚಳಿಯ ವಾತಾವರಣವಿದ್ದು, ಜನ ರಕ್ಷಣೆ ಪಡೆಯಲು ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ.
ಚಳಿಯಿಂದ ಪಾರಾಗಲು ಮೂಲೆ ಸೇರಿಕೊಂಡಿದ್ದ ಬೆಚ್ಚನೆಯ ಹೊದಿಕೆ, ಟೋಪಿ, ಉಡುಪುಗಳನ್ನು ಹುಡುಕಿ ಧರಿಸುವಂತಾಗಿದೆ. ಇನ್ನು ಅಲ್ಲಲ್ಲಿ ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳುವ ದೃಶ್ಯ ಕಂಡುಬಂದಿದೆ. ಚಳಿಯ ತೀವ್ರತೆ ಕಾರಣ ಬಿಸಿ ಕಾಫೀ, ಟೀ ಕುಡಿಯುವ ಪ್ರಮಾಣ ಜಾಸ್ತಿಯಾಗಿದೆ. ಇದರೊಂದಿಗೆ ಸಿಗರೇಟ್, ಬೀಡಿ, ಮದ್ಯಕ್ಕೂ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಚಳಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗಿದೆ.