ಪರಸ್ಪರ ಒಪ್ಪಿಗೆ ಮೇರೆಗೆ ಲೈಂಗಿಕ ಸಂಬಂಧ ಹೊಂದುವ ವಯಸ್ಸನ್ನು 16 ರಿಂದ 18 ವರ್ಷಕ್ಕೆ ಏರಿಕೆ ಮಾಡಲಾಗಿದೆ ಎಂಬ ಸಂಗತಿ ಬಹುತೇಕರಿಗೆ ಗೊತ್ತೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದೆ.
ಅಪ್ರಾಪ್ತರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ‘ಪೋಸ್ಕೋ’ ಕಾಯ್ದೆ ಅಡಿ ಬಂಧಿತನಾಗಿರುವ ಯುವಕನ ಬಿಡುಗಡೆಗೆ ಕೋರಿ ಮಧ್ಯ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಸಂಜಯ್ ಕರೋಲ್ ಹಾಗೂ ಪಿ.ವಿ. ಸಂಜಯ್ ಕುಮಾರ್ ಅವರುಗಳಿದ್ದ ಪೀಠ ಅರ್ಜಿಯನ್ನು ತಳ್ಳಿ ಹಾಕಿ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಪರಸ್ಪರ ಆಕರ್ಷಣೆಗೆ ಒಳಗಾಗುವ ಯುವ ವಯೋಮಾನದವರು ಲೈಂಗಿಕ ಸಂಪರ್ಕ ಬೆಳೆಸಿದ ವೇಳೆ ಒಂದೊಮ್ಮೆ ಆಕೆ ಅಥವಾ ಆತ 18 ವರ್ಷಗಳಿಗಿಂತ ಕೆಳಗಿನವರಾಗಿದ್ದರೆ ಕೃತ್ಯ ಎಸಗಿದ ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಾಗುತ್ತದೆ.
ಈ ಆರೋಪದ ಮೇಲೆ ಪ್ರಕರಣ ದಾಖಲಾದರೆ ಜಾಮೀನು ಸಿಗುವುದು ಅಷ್ಟು ಸುಲಭವಲ್ಲ. ಹೀಗಾಗಿ ಲೈಂಗಿಕ ಸಮ್ಮತಿಯ ವಯಸ್ಸನ್ನು 16 ವರ್ಷಕ್ಕೆ ಇಳಿಕೆ ಮಾಡಬೇಕೆಂಬ ಕೂಗು ಕೆಲವರಿಂದ ಕೇಳಿ ಬಂದಿತ್ತು. ಇದೀಗ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.