ಬೆಂಗಳೂರು: ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದ ತತ್ತರಿಸಿದ್ದ ರಾಜ್ಯದ ಜನತೆಗೆ ಮೈ ಕೊರೆಯುವ ಚಳಿ ಗಡಗಡ ನಡುಗುವಂತೆ ಮಾಡಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಜನ ಮನೆಯಿಂದ ಹೊರಗೆ ಬರದಂತಾಗಿದೆ. ಬೆಳಿಗ್ಗೆ ವಾಕ್ ಹೋಗುವವರ ಸಂಖ್ಯೆ ಭಾರಿ ಕಡಿಮೆಯಾಗಿದೆ. ಎದ್ದೇಳಲು ಆಗದಂತಹ ಚಳಿಯಾಗುತ್ತಿದ್ದು, ಜನ ಸ್ವೆಟರ್, ಟೋಪಿ ಸೇರಿದಂತೆ ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ. ಅಲ್ಲಲ್ಲಿ ಬೆಂಕಿ ಹಾಕಿ ಬಿಸಿ ಮಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿವೆ. ಕಾಫಿ, ಟೀ ಬಿಸಿ ಪಾನೀಯಗಳ ಸೇವನೆ ಹೆಚ್ಚಾಗಿದೆ.
ಗ್ರಾಮೀಣ, ನಗರ ಪ್ರದೇಶದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ವಿಜಯಪುರ, ಬೆಳಗಾವಿ, ಬೀದರ್, ಗದಗ, ಮಡಿಕೇರಿ, ಚಿತ್ರದುರ್ಗ, ಬಳ್ಳಾರಿ, ಧಾರವಾಡ, ಮಂಡ್ಯ, ರಾಯಚೂರು, ಮೈಸೂರು, ಬೆಂಗಳೂರು, ಕಲಬುರ್ಗಿಯಲ್ಲಿ ಕಡಿಮೆ ತಾಪಮಾನ ದಾಖಲಾಗಿದೆ.