ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಮತ್ತೊಂದು ಅಧ್ಯಾಯ ಸೇರಿಸಿದ್ದಾರೆ ನಾಗಾಲ್ಯಾಂಡ್ ಬಿಜೆಪಿ ನಾಯಕ ತೆಮ್ಜೆನ್ ಇಮ್ನಾ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಬ್ರಿಟನ್‌ಗೆ ಭೇಟಿ ಕೊಟ್ಟಿದ್ದ ವಿಚಾರವಾಗಿ ಇಮ್ನಾ ವಾಗ್ದಾಳಿ ನಡೆಸಿದ್ದಾರೆ.
ಲಂಡನ್‌ನ ಚಾಟ್ಹಾಮ್ ಹೌಸ್ ಎದುರು ರಾಹುಲ್ ನಿಂತಿರುವ ಫೋಟೋವೊಂದನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ. “ನೀವೇನು ನಂಬಿದ್ದೀರೋ ಅದಕ್ಕೆ ಬದ್ಧರಾಗಿರಿ, ಈ ವಿಚಾರದಲ್ಲಿ ನೀವು ಏಕಾಂಗಿಯಾದರೂ ಪರವಾಗಿಲ್ಲ,” ಎಂದು ಕಾಂಗ್ರೆಸ್ ಕ್ಯಾಪ್ಷನ್ ಕೊಟ್ಟಿದೆ.
ಈ ಫೋಟೋಗೆ ಪ್ರತಿಕ್ರಿಯಿಸಿದ ಇಮ್ನಾ, “ಒಪ್ಪಲೇ ಬೇಕು. ಫೋಟೋ ಏನೋ ಚೆನ್ನಾಗಿದೆ. ಕಾನ್ಫಿಡೆನ್ಸ್ ಮತ್ತು ಪೋಸ್‌ಗಳು ಬೇರೆಯದೇ ಲೆವೆಲ್‌ನಲ್ಲಿವೆ,” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.
ಬ್ರಿಟನ್ ಪ್ರವಾಸದ ವೇಳೆ ತಮ್ಮ ಸೆಲ್ಫಿಯೊಂದನ್ನು ಸೆರೆ ಹಿಡಿದಿರುವ ರಾಹುಲ್ ಕುರಿತು ಮಾತನಾಡಿದ ಇಮ್ನಾ, “ಇತರರು ಸೆಲ್ಫೀ ತೆಗೆದುಕೊಳ್ಳಲು ವಿದೇಶಕ್ಕೆ ಹೋದರೆ ವಿದೇಶಿಯರು ಭಾರತಕ್ಕೆ ಬಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯೊಂದಿಗೆ ತಮ್ಮ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ,” ಎಂದು ವ್ಯಂಗ್ಯವಾಡಿದ್ದಾರೆ.
ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬನೀಸ್ ಪ್ರಧಾನಿ ಮೋದಿಯೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಿರುವ ಫೋಟೋವೊಂದನ್ನು ಇಮ್ನಾ ಇದೇ ಸಂದರ್ಭ ಟ್ವೀಟ್ ಮಾಡಿದ್ದಾರೆ.
ತಮ್ಮ ಹಾಸ್ಯಪ್ರಜ್ಞೆಯಿಂದ ಭಾರೀ ಜನಪ್ರಿಯರಾಗಿರುವ ಇಮ್ನಾರ ಈ ಲೇಟೆಸ್ಟ್ ಟ್ವೀಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.
ಲಂಡನ್‌ನಲ್ಲಿ ರಾಹುಲ್ ಭಾಷಣದ ಕುರಿತಾಗಿ ಕೆಲ ದಿನಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ತಾರಕಕ್ಕೇರಿತ್ತು.