ಆಗಾಗ್ಗೆ ಭಾರಿ ಸುದ್ದಿ ಮಾಡುತ್ತಿರುವ ಹಾರುವ ವಸ್ತುಗಳ ಇರುವಿಕೆಯ ಕುರಿತು ಪತ್ತೆಹಚ್ಚಲು ಸ್ಥಾಪಿಸಲಾದ ಹೊಸ ಪೆಂಟಗನ್ ಕಚೇರಿಯು ಈ ಬಗ್ಗೆ ತನಿಖೆ ಮಾಡುತ್ತಿದ್ದು, ಇದುವರೆಗೆ ಅನ್ಯಲೋಕದ ಜೀವನದ ಯಾವುದೇ ಪುರಾವೆಗಳು ಸಿಕ್ಕಿಲ್ಲ.
ಅನ್ಯಲೋಕದ ವಸ್ತುಗಳ ತನಿಖೆಗೆ ಅಮೆರಿಕದಿಂದ ಆಲ್-ಡೊಮೈನ್ ಅನಾಮಲಿ ರೆಸಲ್ಯೂಷನ್ ಆಫೀಸ್ (AARO) ಅನ್ನು ಜುಲೈನಲ್ಲಿ ಸ್ಥಾಪಿಸಲಾಗಿದೆ.
ಆಕಾಶದಲ್ಲಿ ಗುರುತಿಸಲಾಗದ ವಸ್ತುಗಳನ್ನು ಮಾತ್ರವಲ್ಲದೆ ನೀರೊಳಗಿನ ಅಥವಾ ಬಾಹ್ಯಾಕಾಶದಲ್ಲಿಯೂ ಇರುವ ವಸ್ತುಗಳ ಇರುವಿಕೆಯ ಬಗ್ಗೆ ತನಿಖೆ ಮಾಡುವುದು ಇದರ ಕೆಲಸವಾಗಿದೆ.
ಕೆಲ ವರ್ಷಗಳಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಅನ್ಯಜೀವಿಗಳ ಇರುವಿಕೆ ಕುರಿತಂತೆ ಸುದ್ದಿಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಇದನ್ನು ಸ್ಥಾಪನೆ ಮಾಡಲಾಗಿದೆ.
2021ರ ಜೂನ್ನಲ್ಲಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯು 2004 ಮತ್ತು 2021 ರ ನಡುವೆ ಅಂತಹ 144 ವರದಿಗಳನ್ನು ಸ್ವೀಕರಿಸಿದ್ದವು. ಆದರೆ ಯಾವುದನ್ನೂ ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಜ್ಞಾತ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯವನ್ನು ಸುಧಾರಿಸುವ ಮಾರ್ಗಗಳಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದೆ ಎಂದು ಗುಪ್ತಚರ ರಕ್ಷಣಾ ಕಾರ್ಯದರ್ಶಿ ರೊನಾಲ್ಡ್ ಮೌಲ್ಟ್ರಿ ಹೇಳಿದ್ದಾರೆ.