ಭೋಪಾಲ್: ಮಹಿಳಾ ಸಬಲೀಕರಣದ ಮಹತ್ವದ ಹೆಜ್ಜೆ ಇಟ್ಟಿರುವ ಮಧ್ಯಪ್ರದೇಶ ಸರ್ಕಾರ ಮದುವೆಯಾಗದ ಅವಿವಾಹಿತ ಹೆಣ್ಣು ಮಕ್ಕಳಿಗೆ 25 ವರ್ಷದ ನಂತರವೂ ಪಿಂಚಣಿ ನೀಡಲು ನಿರ್ಧರಿಸಿದೆ.
ಸರ್ಕಾರಿ ನೌಕರ ಪೋಷಕರ ಮರಣದ ನಂತರ ಅವಿವಾಹಿತ ಮಗಳಿಗೆ ಕುಟುಂಬ ಪಿಂಚಣಿ ನೀಡಲು ಮಧ್ಯಪ್ರದೇಶ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಹಣಕಾಸು ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದು ಮುಖ್ಯಮಂತ್ರಿಗಳ ಸಚಿವಾಲಯದಿಂದ ಸಾಮಾನ್ಯ ಆಡಳಿತ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಪಿಂಚಣಿ ನಿಯಮಗಳನ್ನು ಪರಿಷ್ಕರಿಸಲಾಗಿದ್ದು, ಕುಟುಂಬ ಪಿಂಚಣಿ ಮಂಡಳಿಯ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದೆ.
ಹೆಣ್ಣು ಮಕ್ಕಳಿಗೆ ಕುಟುಂಬ ಪಿಂಚಣಿಯ ಲಾಭ ಪಡೆಯಲು ಮುಖ್ಯಮಂತ್ರಿ ಸಚಿವಾಲಯ ಸಾಮಾನ್ಯ ಆಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಕುಟುಂಬ ಪಿಂಚಣಿಯನ್ನು 18 ವರ್ಷದ ಪುತ್ರ ಮತ್ತು 25 ವರ್ಷದೊಳಗಿನ ಪುತ್ರಿಯರಿಗೆ ನೀಡಲಾಗುತ್ತಿತ್ತು. ಮದುವೆಯಾದ ನಂತರ ಪಿಂಚಣಿ ನೀಡುತ್ತಿರಲಿಲ್ಲ. ಅವಿವಾಹಿತ ಹೆಣ್ಣು ಮಕ್ಕಳಿಗೆ 25 ವರ್ಷದ ವಯಸ್ಸಿನ ಮಿತಿ ರದ್ದು ಮಾಡಲಾಗಿದೆ. ಅವರು ಮದುವೆಯಾಗುವವರೆಗೂ ಪಿಂಚಣಿ ಪಡೆಯಬಹುದಾಗಿದೆ. ಪಿಂಚಣಿ ಪಡೆಯುವ ಹೆಣ್ಣುಮಕ್ಕಳ ಮದುವೆಯಾದರೆ ಪಿಂಚಣಿ ರದ್ದು ಮಾಡಲಾಗುವುದು. ಅಂಗವಿಕಲ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಕುಟುಂಬ ಪಿಂಚಣಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಹೇಳಲಾಗಿದೆ.
ಪ್ರಸ್ತಾಪಿತ ಅಂಶಗಳು
ಅವಿವಾಹಿತ ಹೆಣ್ಣು ಮಕ್ಕಳ 25 ವರ್ಷ ವಯಸ್ಸಿನ ಮಿತಿ ಕೊನೆಗೊಳಿಸಿ ಅವರು ಮದುವೆಯಾಗುವವರೆಗೂ ಕುಟುಂಬ ಪಿಂಚಣಿ ನೀಡಲಾಗುವುದು.
ವಿಧವೆ ಮಗಳ ವಿಷಯದಲ್ಲಿ ಅವರು ಬದುಕಿರುವವರೆಗೂ ಕುಟುಂಬ ಪಿಂಚಣಿ ನೀಡಲಾಗುತ್ತದೆ. ತಂದೆ ಅಥವಾ ತಾಯಿ ಜೀವಂತವಾಗಿರುವಾಗ ವಿಧವೆ ಮಗಳ ಹೆಸರನ್ನು ನೀಡಬೇಕಾಗಿರುತ್ತದೆ.
ಮದುವೆಯಾದ ನಂತರ ಪಿಂಚಣಿ ಸ್ಥಗಿತಗೊಳ್ಳಲಿದೆ. ಅಂಗವಿಕಲ ಗಂಡು ಮತ್ತು ಹೆಣ್ಣು ಮಕ್ಕಳಿದ್ದರೆ ಕುಟುಂಬ ಪಿಂಚಣಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಮಗನಿಗೆ ಪಿಂಚಣಿ ಪಡೆಯುವ ವಯಸ್ಸನ್ನು 18 ವರ್ಷಕ್ಕೆ ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.