ಬೆಳಗಾವಿ(ಸುವರ್ಣ ಸೌಧ): ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಪಿಂಚಣಿಯನ್ನು ಮನೆಬಾಗಿಲಿಗೆ ತಲುಪಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ನ ಬಂಡೆಪ್ಪ ಕಾಶೆಂಪೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ವೃದ್ಧಾಪ್ಯ ವೇತನ ಸೇರಿದಂತೆ ಮಾಸಾಶನವನ್ನು ಬ್ಯಾಂಕಿಗೆ ಹೋಗಿ ಪಡೆಯಲು ಸಾಧ್ಯವಾಗದವರಿಗೆ ಮನೆಬಾಗಿಲಿಗೆ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಪೋಸ್ಟ್ ಮನ್ ಗಳ ಮೂಲಕ ಫಲಾನುಭವಿಗಳಿಗೆ ತಲುಪಿಸಲಾಗುವುದು. ಪಿಂಚಣಿ ಪಡೆಯಲು ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗಿದ್ದು, 8 -9 ಕಿಲೋಮೀಟರ್ ದೂರದ ಬ್ಯಾಂಕಿಗೆ ಹೋಗುವ ಪರಿಸ್ಥಿತಿ ಇದೆ. ಈ ಹಿಂದೆ ಪೋಸ್ಟ್ ಮನೆಗಳ ಮೂಲಕ ಮನೆಬಾಗಿಲಿಗೆ ಪಿಂಚಣಿ ತಲುಪಿಸಲಾಗುತ್ತಿದ್ದು, ಮಧ್ಯವರ್ತಿಗಳ ಹಾವಳಿಯಿಂದ ಫಲಾನುಭವಿಗಳಿಗೆ ಸರಿಯಾಗಿ ಪಿಂಚಣಿ ತಲುಪುತ್ತಿರಲಿಲ್ಲ. ಹೀಗಾಗಿ ಅಂಚೆ ಕಚೇರಿಗಳಲ್ಲಿ ಖಾತೆ ತೆರೆದು ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಅಲ್ಲಿಗೆ ಹೋಗಿ ಪಿಂಚಣಿ ಪಡೆಯಲು ಸಾಧ್ಯವಾಗದವರಿಗೆ ಪೋಸ್ಟ್ ಮನ್ ಮೂಲಕ ಮನೆಬಾಗಿಲಿಗೆ ಪಿಂಚಣಿ ತಲುಪಿಸಲಾಗುವುದು ಹೇಳಲಾಗಿದೆ.