ಬೆಂಗಳೂರು: ರಾಜ್ಯದಲ್ಲಿ 3.58 ಲಕ್ಷ ಅನರ್ಹ ಪಿಂಚಣಿದಾರರನ್ನು ಪತ್ತೆ ಮಾಡಲಾಗಿದ್ದು, ಸೌಲಭ್ಯ ಕಡಿತಗೊಳಿಸಲಾಗಿದೆ. ಇದರಿಂದ 430 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ರಾಜ್ಯ ಸರ್ಕಾರ 9 ಮಾಸಿಕ ಪಿಂಚಣಿಗಳನ್ನು ನೀಡುತ್ತಿದೆ. ಅರ್ಹತೆಯಿಲ್ಲದ ಅನೇಕರು ಪಿಂಚಣಿ ಪಡೆಯುತ್ತಿದ್ದು, ಅಂಥವರನ್ನು ಗುರುತಿಸಲಾಗಿದೆ. ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದವರ ಗುರುತಿಸಿ ಸೌಲಭ್ಯ ರದ್ದು ಮಾಡಲಾಗಿದೆ. ಈ ರೀತಿ 3.58 ಲಕ್ಷ ಅನರ್ಹ ಪಿಂಚಣಿದಾರರ ಪತ್ತೆ ಮಾಡಲಾಗಿದ್ದು 430 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದರು.
ಕೆಲವು ಶ್ರೀಮಂತರು, ಉದ್ಯೋಗಿಗಳು ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದರು. ಮೃತಪಟ್ಟವರ ಹೆಸರಿನಲ್ಲಿಯೂ ಪಿಂಚಣಿ ಪಾವತಿಯಾಗುತ್ತಿರುವುದು ಪತ್ತೆಯಾಗಿದೆ ಎಂದು ಸಚಿವರು ಹೇಳಿದ್ದಾರೆ. ಅರ್ಹ ಫಲಾನುಭವಿಗಳಿಗೆ ನೇರವಾಗಿ ಪಿಂಚಣಿ ಮಂಜೂರು ಮಾಡಲು ಹಲೋ ಕಂದಾಯ ಸಚಿವರೇ ಸಹಾಯವಾಣಿ ಆರಂಭಿಸಲಿದ್ದು, ಅರ್ಜಿ ಸಲ್ಲಿಕೆಯಾದ 72 ಗಂಟೆಯೊಳಗೆ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ನೀಡಲಾಗುವುದು ಎಂದು ಹೇಳಿದ್ದಾರೆ.