ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆಯಡಿ 72 ಗಂಟೆಗಳಲ್ಲಿ ಮನೆಬಾಗಿಲಿಗೆ ಪಿಂಚಣಿ ತಲುಪಿಸುವ ವ್ಯವಸ್ಥೆಗೆ ಸರ್ಕಾರ ಚಾಲನೆ ನೀಡಿದೆ.
ದೂರವಾಣಿ ಮೂಲಕವೇ ಪಿಂಚಣಿ ಕೋರಿಕೆ ಸ್ವೀಕರಿಸಿ 72 ಗಂಟೆಯಲ್ಲಿ ಮಂಜೂರಾತಿ ಮಾಡುವ ವಿನೂತನ ಕಾರ್ಯಕ್ರಮ ಇದಾಗಿದ್ದು, ಹಲೋ ಕಂದಾಯ ಸಚಿವರೇ ಸಹಾಯವಾಣಿ 155245 ಸಂಖ್ಯೆಗೆ ಕರೆ ಮಾಡುವ ಮೂಲಕ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದಾಗಿದೆ.
ಕುಟುಂಬದ ವಾರ್ಷಿಕ ಆದಾಯ 32 ಸಾವಿರರೂ.ಗಿಂತ ಕಡಿಮೆ ಇರುವ ವೃದ್ಧರು, ವಿಶೇಷಚೇತನರು, ವಿಧವೆಯರು, ಅವಿವಾಹಿತ/ ವಿಚ್ಛೇದಿತ ಮಹಿಳೆಯರಿಗೆ ಮಾಸಿಕ ಪಿಂಚಣಿ ಸೌಲಭ್ಯಕ್ಕೆ ದೂರವಾಣಿ ಮೂಲಕ ಕೋರಿಕೆ ಸಲ್ಲಿಸಬಹುದಾಗಿದೆ.
ನಾಗರಿಕರು ಶುಲ್ಕರಹಿತ ಸಹಾಯವಾಣಿ ಸಂಖ್ಯೆ 155245 ಕ್ಕೆ ಉಚಿತವಾಗಿ ದೂರವಾಣಿ ಕರೆ ಮಾಡುವ ಮೂಲಕ ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆಯನ್ನು ತಿಳಿಸಬೇಕು. ಗ್ರಾಮಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಬಾಗಿಲಿಗೆ ಹೋಗಿ ನವೋದಯ ಮೊಬೈಲ್ ಆಪ್ ಮೂಲಕ ಅರ್ಜಿದಾರರಿಂದ ಮಾಹಿತಿ ಹಾಗೂ ದಾಖಲಾತಿಗಳನ್ನು ಸಂಗ್ರಹಿಸಲಿದ್ದಾರೆ. ಅರ್ಹರಿಗೆ 72 ಗಂಟೆಗಳ ಒಳಗೆ ನಾಡಕಚೇರಿ ಉಪ ತಹಶೀಲ್ದಾರರಿಂದ ಪಿಂಚಣಿಗೆ ಅನುಮೋದನೆ ನೀಡಲಾಗುತ್ತದೆ. ಫಲಾನುಭವಿಗಳ ಮನೆಬಾಗಿಲಿಗೆ ಪಿಂಚಣಿ ಮಂಜೂರಾತಿ ಆದೇಶ ವಿತರಣೆ ಮಾಡಲಾಗುವುದು.