ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಗರಿಕರ ಅನುಕೂಲಕ್ಕಾಗಿ ಆಗಾಗ್ಗೆ ಹಲವಾರು ಯೋಜನೆಗಳನ್ನು ಪ್ರಾರಂಭಿಸುತ್ತವೆ. ಕೆಲವು ಯೋಜನೆಗಳು ಒಂದು ಬಾರಿ ಆರ್ಥಿಕ ಸಹಾಯವನ್ನು ಒದಗಿಸಿದರೆ, ಇನ್ನು ಕೆಲವು ಮಾಸಿಕ ಭತ್ಯೆಗಳನ್ನ ನೀಡುತ್ತವೆ. ಮಾಸಿಕ ಭತ್ಯೆ ಒದಗಿಸುವ ಅಂತಹ ಒಂದು ಯೋಜನೆಯು ನಾಗರಿಕರಿಗೆ ಪ್ರತಿ ತಿಂಗಳು ಪಿಂಚಣಿ ಪಡೆಯಲು ನೆರವಾಗುತ್ತದೆ.
ಭಾರತವು ಪ್ರಾಥಮಿಕವಾಗಿ ಕೃಷಿ ಪ್ರಧಾನ ದೇಶವಾಗಿದ್ದು, ಅನೇಕರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ರೈತರು ತಮ್ಮ ಕೃಷಿ ಚಟುವಟಿಕೆಗಳಿಂದ ತೃಪ್ತಿಕರ ಲಾಭ ಗಳಿಸಲು ಹೆಣಗಾಡುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಸರ್ಕಾರವು ಅವರನ್ನು ಬೆಂಬಲಿಸಲು “ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ” ಎಂಬ ಯೋಜನೆಯನ್ನು ಪರಿಚಯಿಸಿದೆ.
ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು ಮತ್ತು ರೈತರಾಗಿರಬೇಕು. ನಿರ್ದಿಷ್ಟ ವಯಸ್ಸಿನೊಳಗಿನ ವ್ಯಕ್ತಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 15,000 ರೂ.ಗಿಂತ ಕಡಿಮೆ ಮಾಸಿಕ ಆದಾಯ ಹೊಂದಿರುವ 20 ರಿಂದ 42 ವರ್ಷ ವಯಸ್ಸಿನ ಭಾರತೀಯ ರೈತರು ಅರ್ಜಿ ಸಲ್ಲಿಸಲು ಅರ್ಹರು. ಇದಲ್ಲದೆ ಅರ್ಜಿದಾರರು ಈಗಾಗಲೇ NPS, EPFO, ಅಥವಾ ESIC ನಲ್ಲಿ ಸಕ್ರಿಯರಾಗಿದ್ದರೆ ಅವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಪ್ರತಿ ತಿಂಗಳು 55 ರೂ. ನಿಂದ 200 ರೂ. ನಡುವೆ ಹೂಡಿಕೆ ಮಾಡಬೇಕಾಗುತ್ತದೆ. ಈ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಅರ್ಜಿದಾರರಿಗೆ 60 ವರ್ಷ ತುಂಬಿದ ನಂತರ ಅವರು ಪ್ರತಿ ತಿಂಗಳು 3,000 ರೂ. ಪಿಂಚಣಿ ಪಡೆಯುತ್ತಾರೆ.
ಈ ಯೋಜನೆಗಾಗಿ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳು ಅಗತ್ಯವಿದೆ. ಅರ್ಜಿದಾರರು ತಮ್ಮ ಆಧಾರ್ ಕಾರ್ಡ್, ಮತದಾರರ ಕಾರ್ಡ್, ರೇಷನ್ ಕಾರ್ಡ್ ಅಥವಾ ಶಾಶ್ವತ ನಿವಾಸದ ಪುರಾವೆ, ಬ್ಯಾಂಕ್ ಖಾತೆ ಪಾಸ್‌ಬುಕ್, ಸಕ್ರಿಯ ಮೊಬೈಲ್ ಸಂಖ್ಯೆ ಮತ್ತು ಬಣ್ಣದ ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಒದಗಿಸಬೇಕಾಗುತ್ತದೆ. ಆಸಕ್ತ ಅರ್ಹ ವ್ಯಕ್ತಿಗಳು ಈ ದಾಖಲೆಗಳೊಂದಿಗೆ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.