ಬೆಂಗಳೂರು: ವೃದ್ಧಾಪ್ಯ ವೇತನ ಸೇರಿ ಸಾಮಾಜಿಕ ಭದ್ರತಾ ಯೋಜನೆಯ ಮಾಸಾಶನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಮಾಸಾಶನವನ್ನು ಹೆಚ್ಚಳ ಮಾಡಲಾಗಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಸಂಪುಟ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದರು. ಮಾಸಾಶನಗಳನ್ನು 200 ರೂಪಾಯಿ ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟಿಸಲಾಗಿದೆ.
ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನವನ್ನು 1000 ರೂ.ನಿಂದ 1200 ರೂ.ಗೆ ಹೆಚ್ಚಳ ಮಾಡಲಾಗಿದೆ. ವಿಧವಾ ವೇತನ 600 ರೂ.ನಿಂದ 800 ರೂ.ಗೆ, ಶೇಕಡ 40 ರಿಂದ 75 ರಷ್ಟು ಅಂಗವಿಕಲತೆ ಹೊಂದಿದ ವಿಕಲಚೇತನರಿಗೆ 600 ರೂ.ನಿಂದ 800 ರೂ.ಗೆ ಹೆಚ್ಚಳ ಮಾಡಲಾಗಿದ್ದು, ಫಲಾನುಭವಿಗಳಿಗೆ ಆಗಸ್ಟ್ ನಿಂದಲೇ ಪರಿಷ್ಕೃತ ಮಾಸಾಶನ ಸಿಗಲಿದೆ.