ಬೆಂಗಳೂರು: ಕಂದಾಯ ಇಲಾಖೆಯಿಂದ ಮನೆಬಾಗಿಲಿಗೆ ಮಾಸಾಶನ ತಲುಪಿಸುವ ಅರ್ಹರಿಗೆ ಸರ್ಕಾರದ ಸ್ವಯಂ ಪ್ರೇರಿತ ಪಿಂಚಣಿ ಅಭಿಯಾನ ಯೋಜನೆ ಆರಂಭಿಸಲಾಗಿದೆ.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆ ವತಿಯಿಂದ ಹಿರಿಯ ನಾಗರಿಕರು, ವಿಧವೆಯರು, ವಿಕಲಚೇತನರು ಮತ್ತು ಇನ್ನಿತರೆ ಅಸಾಯಕ ಸಮುದಾಯದ ಕಲ್ಯಾಣಕ್ಕಾಗಿ ವಿವಿಧ ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ನಾಗರಿಕರ ಆದಾಯ ಮತ್ತು ವಯೋಮಿತಿ ಆಧರಿಸಿ ಸ್ವಯಂಪ್ರೇರಿತವಾಗಿ ಅರ್ಹ ಫಲಾನುಭವಿಗಳನ್ನು ನವೋದಯ ಆಪ್ ಮತ್ತು ತಂತ್ರಾಂಶದ ಮೂಲಕ ಗುರುತಿಸಿ ಅವರ ಮನೆ ಬಾಗಿಲಲ್ಲೇ ಪಿಂಚಣಿ ಮಂಜೂರಾತಿ ಮಾಡುವ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.
ಫಲಾನುಭವಿ ವಾರ್ಷಿಕ ಆದಾಯ ಮಿತಿಯನ್ನು 12,000 ರೂ.ನಿಂದ 32,000 ರೂ.ಗೆ ಏರಿಕೆ ಮಾಡಲಾಗಿದೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ 68.57 ಲಕ್ಷ ಅರ್ಹ ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ಸೌಲಭ್ಯ ಒದಗಿಸಲಾಗುತ್ತದೆ. ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ವ್ಯವಸ್ಥೆ ಜಾರಿಯಾಗಲಿದೆ. ಫಲಾನುಭವಿಗಳ ಕುಂದುಕೊರತೆ ನಿವಾರಣೆಗೆ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ನಡೆಸಲಾಗುವುದು.
ಕುಟುಂಬದ ದತ್ತಾಂಶದಿಂದ ನಾಗರಿಕರ ಆದಾಯ ಮತ್ತು ವಯೋಮಿತಿ ಆಧರಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸುವುದು. ನವೋದಯ ಆಪ್ ಮೂಲಕ ಮನೆಬಾಗಿಲಲ್ಲಿ ಅರ್ಹ ಫಲಾನುಭವಿಗಳ ಭಾವಚಿತ್ರ ಹಾಗೂ ಮಾಹಿತಿ ಸಂಗ್ರಹಣೆ ಮಾಡಲಾಗುವುದು. ಮನೆಬಾಗಿಲಿಗೆ ಮಾಸಾಶನ ಮಂಜೂರಾತಿ ಪತ್ರ ವಿತರಿಸಲಿದ್ದು, ಬ್ಯಾಂಕ್ ಖಾತೆಗೆ ಮಾಸಾಶನ ಸಂದಾಯವಾಗಲಿದೆ.