ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ಮನೆಬಾಗಿಲಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.
ಇನ್ನು ಮುಂದೆ ಹಿರಿಯ ನಾಗರಿಕರು ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ಅರ್ಹ ಫಲಾನುಭವಿಗಳು ಮಾಸಾಶನ ಪಡೆಯಲು ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಮನೆಬಾಗಿಲಲ್ಲಿ ಆದೇಶ ನೀಡಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುವುದು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯೋಜನೆಗೆ ಚಾಲನೆ ನೀಡಿದ್ದಾರೆ. ಇದೇ ವೇಳೆ ನವೋದಯ ಆಪ್ ಮತ್ತು ತಂತ್ರಾಂಶಕ್ಕೆ ಚಾಲನೆ ನೀಡಲಾಗಿದೆ. 9 ಮಾಸಿಕ ಪಿಂಚಣಿ ಯೋಜನೆ ಮತ್ತು 3 ಏಕಕಾಲಿಕ ಸಹಾಯಧನ ನೆರವು ಯೋಜನೆ ಜಾರಿಯಲ್ಲಿದ್ದು, ಸೌಲಭ್ಯ ಪಡೆಯುತ್ತಿರುವವರ ಮಾಹಿತಿ ಮರುಪರಿಶೀಲನೆ, ಪರಿಷ್ಕರಣೆ ನಡೆಸುವ ಜೊತೆಗೆ ಹೊಸ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಖಾತೆಗೆ ಪಿಂಚಣಿ ಜಮೆ ಮಾಡಲಾಗುವುದು.
ಕಂದಾಯ ಇಲಾಖೆಯಲ್ಲಿ ಎಲ್ಲ ಫಲಾನುಭವಿಗಳ ಆಧಾರ್ ಸಂಖ್ಯೆ, ಪಡಿತರ ಚೀಟಿ, ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಮಾಹಿತಿ ಲಭ್ಯವಿದ್ದು, ಆಧಾರ್ ಕಾರ್ಡ್ ನಲ್ಲಿರುವ ಜನ್ಮ ದಿನಾಂಕ 60 ವರ್ಷ ಪೂರ್ಣವಾಗುತ್ತಿದ್ದಂತೆ ಅಂತಹವರ ಮಾಹಿತಿ ಪರಿಶೀಲನೆ ನಡೆಸಿ ಪಿಂಚಣಿಗೆ ಅರ್ಹರಾಗಿದ್ದರೆ ಮನೆ ಬಾಗಿಲಲ್ಲೇ ಆದೇಶ ಪತ್ರ ನೀಡಲಾಗುವುದು ಎಂದು ಹೇಳಲಾಗಿದೆ.