ಬೆಂಗಳೂರು: ಅನರ್ಹರ ಪಿಂಚಣಿ ತಡೆಗೆ ಪಡಿತರ ಚೀಟಿ ಮತ್ತು ಪಿಂಚಣಿ ತಂತ್ರಾಂಶಗಳನ್ನು ಜೋಡಣೆ ಮಾಡಲಾಗುತ್ತಿದೆ. ಕುಟುಂಬದ ವಾರ್ಷಿಕ ಆದಾಯ 30 ಸಾವಿರ ರೂಪಾಯಿ ಮೇಲ್ಪಟ್ಟವರು ಕೂಡ ಪಿಂಚಣಿಗೆ ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕರಿಸಲು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ತಂತ್ರಜ್ಞಾನ ರೂಪಿಸಲಾಗಿದೆ.
ಈಗ ದಾಖಲೆಗಳ ಜೊತೆಗೆ ಆಧಾರ್ ಕಾರ್ಡ್ ಕೂಡ ಸಲ್ಲಿಸಬೇಕಿದ್ದು, ಆಧಾರ್ ಸಂಖ್ಯೆ ವಿವಿಧ ಇಲಾಖೆಗಳ ಹಲವು ಯೋಜನೆಗಳಿಗೆ ಜೋಡಣೆಯಾದ ಸಂದರ್ಭದಲ್ಲಿ ಆದಾಯ ತಕ್ಷಣ ಗೊತ್ತಾಗುತ್ತದೆ. ಹೆಚ್ಚುವರಿ ಆದಾಯ ಇರುವವರ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಪಿಂಚಣಿದಾರರು ಕಡ್ಡಾಯವಾಗಿ ಪಡಿತರ ಚೀಟಿ, ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಬೇಕಿದೆ.
ಪಡಿತರ ಹಾಗೂ ಪಿಂಚಣಿ ತಂತ್ರಾಂಶಗಳೆರಡನ್ನು ಜೋಡಣೆ ಮಾಡಲಾಗಿದೆ. ಬಿಪಿಎಲ್ ಪಡೆಯಲು ವಾರ್ಷಿಕ 1.20 ಲಕ್ಷ ರೂಪಾಯಿ ಆದಾಯ ಮಿತಿ ಇದೆ. ಪಿಂಚಣಿ ಯೋಜನೆಗೆ 30 ಸಾವಿರ ರೂ. ವಾರ್ಷಿಕ ಆದಾಯ ಮಿತಿಗೊಳಿಸಲಾಗಿದೆ. ಆಧಾರ್ ಜೋಡಣೆಯಾಗದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಎಲ್ಲಾ ಇಲಾಖೆಗಳ ಸೇವೆ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲಾಗಿದ್ದು, ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯುವಂತಿಲ್ಲ. ವಾರ್ಷಿಕ ಆದಾಯ 30 ಸಾವಿರ ರೂ. ಮೀರಿದವರು ಪಿಂಚಣಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.
ಪ್ರಸ್ತುತ ಹೊಸದಾಗಿ ಸಲ್ಲಿಸುವ ಅರ್ಜಿಗಳಿಗೆ ಈ ನಿಯಮ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ 13 ವಿವಿಧ ಯೋಜನೆಗಳಡಿ ಸುಮಾರು 70 ಲಕ್ಷಕ್ಕೂ ಅಧಿಕ ಮಂದಿ ಮಾಸಾಶನ ಫಲಾನುಭವಿಗಳಿದ್ದಾರೆ ಎಂದು ಹೇಳಲಾಗಿದೆ.
60 ವರ್ಷ ಮೇಲ್ಪಟ್ಟವರು ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಿಕ ಪಿಂಚಣಿ ಪಡೆಯಬಹುದಿತ್ತು. ಪಡಿತರ ಪಿಂಚಣಿ ಜೋಡಣೆ ಮಾಡಿ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಬಿಪಿಎಲ್ ಕಾರ್ಡ್ ಗೆ 1.20 ಲಕ್ಷ ರೂ. ವಾರ್ಷಿಕ ಆದಾಯ ಮಿತಿ ಇದ್ದು, ಪಿಂಚಣಿ ಯೋಜನೆಗೆ 30 ಸಾವಿರ ರೂಪಾಯಿ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.