
ಬೆಂಗಳೂರು: ಪೆನ್ನಾರ್ ನದಿ ನೀರು ಹಾಗೂ ಕೋಲಾರ ಭಾಗದಿಂದ ತಮಿಳುನಾಡಿನ ಕಡೆಗೆ ಹರಿಯುವ ನೀರಿನ ವಿವಾದದ ಕುರಿತು ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚೆ ನಡೆಸಲು ದೆಹಲಿಗೆ ಭೇಟಿ ನೀಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಪೆನ್ನಾರ್ ನದಿ ನೀರಿನ ವಿಚಾರವಾಗಿ ಎರಡು ರಾಜ್ಯಗಳ ಪ್ರತಿನಿಧಿಗಳನ್ನು ಸೇರಿಸಿ ನಿಮ್ಮಲ್ಲೇ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಿ ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನವಿತ್ತು. ಆದರೆ ಸೋಮವಾರ ರಾತ್ರಿ ತಮಿಳುನಾಡಿನ ಪ್ರತಿನಿಧಿಗಳು ಬರುವುದಿಲ್ಲ, ಅವರು ಪ್ರತ್ಯೇಕವಾಗಿ ಮನವಿ ಸಲ್ಲಿಸುತ್ತಾರೆ ಎನ್ನುವ ಸಂದೇಶವಿದೆ. ಅಲ್ಲಿಗೆ ಹೋದಾಗ ಇದರ ಸತ್ಯಾಸತ್ಯತೆ ತಿಳಿಯುತ್ತದೆ. ಆದರೆ ನಾನು ಆಹ್ವಾನವನ್ನು ತಿರಸ್ಕರಿಸಬಾರದು ಎಂದು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದರು.
ಜೊತೆಗೆ ಇತರೇ ಇಲಾಖೆಗಳ ಸಚಿವರು, ಅರಣ್ಯ ಇಲಾಖೆಯ ಸಚಿವರನ್ನು ಸಮಯ ಸಿಕ್ಕರೆ ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.