
ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಮಾಜಿ ಸಚಿವ ಮತ್ತು ಜೆಡಿಎಸ್ ಶಾಸಕ ಎ. ಮಂಜು ಅವರ ಮೇಲೆ ಆರೋಪ ಕೇಳಿ ಬಂದಿದೆ.
ತಲೆಮರಸಿಕೊಂಡಿರುವ ಆರೋಪಿ ನವೀನ್ ಗೌಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ನನಗೆ ಏಪ್ರಿಲ್ 20ರಂದು ದಾರಿಯಲ್ಲಿ ಪೆನ್ ಡ್ರೈವ್ ಸಿಕ್ಕಿತ್ತು. ಅದನ್ನು ಅರಕಲಗೂಡು ಶಾಸಕ ಮಂಜು ಅವರಿಗೆ ಏ. 21ರಂದು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ಕೊಟ್ಟಿದ್ದೇನೆ. ಕುಮಾರಸ್ವಾಮಿ ಹೇಳಿದಂತೆ ಇವರೇ ವಿಡಿಯೋ ವೈರಲ್ ಹಿಂದೆ ಇರುವ ಮಹಾನಾಯಕ ಇರಬಹುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಎ. ಮಂಜು ಅವರು, ನವೀನ್ ಗೌಡ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಪೆನ್ ಡ್ರೈವ್ ಕೊಟ್ಟಿದ್ದಾನೆ ಎಂದರೆ ಆತನೇ ಹಂಚಿದ್ದಾನೆ ಎಂಬುದು ಸ್ಪಷ್ಟ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ ನವೀನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಕಷ್ಟಕಾಲದಲ್ಲಿ ದೇವೇಗೌಡರ ಕುಟುಂಬದ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾರೆ.