ಇಸ್ರೆಲ್ ಕಂಪನಿಯ ಗೂಢಚರ್ಯ ತಂತ್ರಾಶದ ಮೂಲಕ ಕೇಂದ್ರ ಸರ್ಕಾರವು ಪತ್ರಕರ್ತರು ಸೇರಿದಂತೆ 300ಕ್ಕೂ ಅಧಿಕ ಮಂದಿಯ ಫೋನ್ ಕದ್ದಾಲಿಕೆ ಮಾಡಿದೆ ಎಂಬ ಪ್ರಕರಣದಡಿಯಲ್ಲಿ ಇಂದು ಮಧ್ಯಂತರ ಆದೇಶ ಪ್ರಕಟಿಸಿದ ಸುಪ್ರೀಂ ಕೋರ್ಟ್ ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ.
ಇದೇ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಪೆಗಾಸಸ್ ಭಾರತದ ಸಂವಿಧಾನವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.
ಸುಪ್ರೀಂ ಕೋರ್ಟ್ ಈ ವಿಚಾರವಾಗಿ ತನಿಖೆಗೆ ಸಮಿತಿ ರಚಿಸುವ ಮೂಲಕ ಮಹತ್ವದ ಹೆಜ್ಜೆಯನ್ನೇ ಇಟ್ಟಿದೆ. ಸತ್ಯ ಶೀಘ್ರದಲ್ಲೇ ಹೊರಬರಲಿದೆ ಎಂಬ ನಂಬಿಕೆ ನನಗಿದೆ. ಪಾರ್ಲಿಮೆಂಟ್ ಸೆಷನ್ ವೇಳೆ ನಾವು ಪೆಗಾಸಸ್ ವಿಚಾರದ ಬಗ್ಗೆ ಧ್ವನಿಯೆತ್ತಿದ್ದೆವು. ಆದರೆ ಈಗ ಸುಪ್ರೀಂಕೋರ್ಟ್ ಕಾಂಗ್ರೆಸ್ ಇಷ್ಟು ದಿನ ಏನು ವಾದ ಮಾಡಿತ್ತೋ ಅದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.
ಪೆಗಾಸಸ್ ಖರೀದಿ ಮಾಡಿದ್ದು ಯಾರು..? ಯಾರ್ಯಾರ ಮೇಲೆ ಪೆಗಾಸಸ್ ಬಳಕೆ ಮಾಡಲಾಗಿದೆ..? ಪೆಗಾಸಸ್ ಮೂಲಕ ಸಂಗ್ರಹಿಸಲಾದ ಮಾಹಿತಿಯು ಇನ್ಯಾವ ದೇಶದ ಬಳಿ ಏನಾದರೂ ಇದೆಯೇ..? ಎಂದು ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಪೆಗಾಸಸ್ ವಿಚಾರವಾಗಿ ಇಂದು ಮಧ್ಯಂತರ ಆದೇಶ ಹೊರಡಿಸಿರುವ ಸುಪ್ರೀಂಕೋರ್ಟ್, ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೇ ಸಾಮಾನ್ಯ ಜನತೆಗೂ ತಮ್ಮ ಗೌಪ್ಯತೆ ಕಾಪಾಡಿಕೊಳ್ಳುವ ಹಕ್ಕಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.