ಬೆಂಗಳೂರು ಸೂಪರ್ ಆದ ಕ್ಲೈಮೇಟ್ ಜೊತೆ ಜನಜಂಗುಳಿ, ಟ್ರಾಫಿಕ್ ಕಿರಿಕಿರಿಗೂ ಪ್ರಖ್ಯಾತಿ ಪಡೆದಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಮುಂಬೈನ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಆಟೋ ಪ್ರಯಾಣದ ಸಂದರ್ಭ ತಮಗಾದ ಕೆಟ್ಟ ಅನುಭವವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ನ್ಯೂರಲ್‌ಗ್ಯಾರೇಜ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ಮಂದರ್ ನಾಟೇಕರ್ ಎಂಬವರು ನಗರದಲ್ಲಿ 500 ಮೀಟರ್ ಪ್ರಯಾಣಕ್ಕಾಗಿ ಅಟೋದಲ್ಲಿ 100 ರೂ. ಪಾವತಿ ಮಾಡಿದ ಬಗ್ಗೆ ಬರೆದುಕೊಂಡಿದ್ದಾರೆ. ಈ ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿರೋದು ಬೆಂಗಳೂರಿನಲ್ಲಿ ಅಲಂಕಾರಿಕ ವಸ್ತುವಾಗಿರುವ ಶ್ರೇಷ್ಠವಾದ ಆಟೋ ಮೀಟರ್. ಇದು ತುಂಬಾ ದುಬಾರಿಯಾಗಿದೆ, ಯಾಕಂದ್ರೆ ಅದು ಎಂದಿಗೂ ಬಳಸುವುದಿಲ್ಲ ಎಂದು ಪೋಸ್ಟ್‌ನಲ್ಲಿ ಘಟನೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
ನಾನು ಕೇವಲ 500 ಮೀಟರ್ ಪ್ರಯಾಣಕ್ಕಾಗಿ 100 ರೂ.ಗಳನ್ನು ಪಾವತಿಸಿದ್ದೇನೆ. ಆದ್ರೆ ಮುಂಬೈನಲ್ಲಿ ಸುಮಾರು 9 ಕಿಮೀಗೆ 100 ರೂ.ಗಳು ಮೀಟರ್ ದರ ವಿಧಿಸುತ್ತಾರೆ ಎಂದು ಮಂದರ್ ನಾಟೇಕರ್ ಮೆನ್ಶನ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದು ಈ ಪೋಸ್ಟ್‌ಗೆ ಅನೇಕರು ಕಮೆಂಟ್ ಮಾಡಿದ್ದಾರೆ.
ಟಿವಿಎಫ್ ಅಧ್ಯಕ್ಷ ವಿಜಯ್ ಕೋಶಿ ಅವರು ಕಮೆಂಟ್ ಮಾಡಿದ್ದು ಮುಂಬೈ ಹೊರತುಪಡಿಸಿ ಉಳಿದ ನಗರಗಳಲ್ಲಿ ಆಟೋ ಚಾಲಕರು ದುಬಾರಿ ಹಣ ವಸೂಲಿ ಮಾಡುತ್ತಾರೆ ಎಂದು ಹೇಳಿದ್ದಾರೆ. ಅದರಲ್ಲೂ ಚೆನ್ನೈ ಈ ಮೂಲಕ ಕುಖ್ಯಾತಿ ಗಳಿಸಿದೆ ಎಂದಿದ್ದಾರೆ.
ಕೋಶಿ ಅವರ ಕಮೆಂಟ್‌ಗೆ ಪ್ರತಿಕ್ರಿಯಿಸಿರುವ ನಾಟೇಕರ್, ಈ ಹೆದ್ದಾರಿ ದರೋಡೆ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಕಾನೂನುಬದ್ಧವಾಗಿಲ್ಲದೆ ಈ ರೀತಿಯ ದುಬಾರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದು ನಗರದಿಂದ ನಗರಕ್ಕೆ ಬದಲಾಗುತ್ತದೆ ಇದರ ಜೊತೆ ನೀವು ಬೇರೆ ನಗರದವರಾಗಿದ್ದರೆ ಹೆಚ್ಚು ಹಣ ವಸೂಲಿ ಮಾಡುತ್ತಾರೆ. ಆದರೆ ವಿಧಿಯಿಲ್ಲದೇ ನಾವು ಪಾವತಿಸಬೇಕಾಗುತ್ತದೆ ಎಂದು ಒಬ್ರು ಹೇಳಿದ್ದಾರೆ.
ಈ ಮಧ್ಯೆ ಆಟೋ ಡ್ರೈವರ್ ಬಾಡಿಗೆಗೆ ಬರೋದಕ್ಕೆ ಒಪ್ಪಿಕೊಂಡಿದ್ದು ನಾಟೇಕರ್ ಅವರ ಅದೃಷ್ಟವೇ ಸರಿ ಎಂದು ಕೆಲವರು ತಮಾಷೆ ಆಡಿದ್ದಾರೆ. “ನೀವು ಅದೃಷ್ಟವಂತರು. ಕನಿಷ್ಠ ಅವರು ನಿಮ್ಮನ್ನು ಆಟೋದಲ್ಲಿ ಹತ್ತಿಸಿಕೊಳ್ಳುವುದಕ್ಕೆ ಒಪ್ಪಿಕೊಂಡರು. ಯಾಕಂದ್ರೆ ಸಾಮಾನ್ಯವಾಗಿ ಅವರು ಇಡೀ ದಿನ ಕುಳಿತು ದಿನ ಕಳಿಯೋದಕ್ಕೆ ಇಷ್ಟ ಪಡುತ್ತಾರೆ ಎಂದು ಬರೆದಿದ್ದಾರೆ.