ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಕರ್ತವ್ಯಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯೋಜಿಸದಂತೆ ಕೋರಲಾಗಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬದಲಿಗೆ ಬೇರೆ ಅಧಿಕಾರಿಗಳನ್ನು ಚೆಕ್ ಪೋಸ್ಟ್ ಕರ್ತವ್ಯಕ್ಕೆ ನಿಯೋಜಿಸುವಂತೆ ಮುಖ್ಯ ಚುನಾವಣಾಧಿಕಾರಿಗಳಿಗೆ ಪಂಚಾಯತ್ ರಾಜ್ ಇಲಾಖೆ ಮನವಿ ಮಾಡಿದೆ.
ಪಿಡಿಒಗಳು ಚುನಾವಣೆ ಸಂದರ್ಭದಲ್ಲಿ ಮತಗಟ್ಟೆಗಳಿಗೆ ಅಗತ್ಯ ಮೂಲಸೌಕರ್ಯ ತಲುಪಿಸುವ, ಸ್ವೀಪ್ ಕಾರ್ಯಕ್ರಮ ನೋಡಿಕೊಳ್ಳುತ್ತಾರೆ. ಗ್ರಾಮ ಪಂಚಾಯಿತಿಯ ಎಲ್ಲಾ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರು ಒದಗಿಸಲು, ಗಣಕೀಕೃತ ಕೆಲಸ ಕಾರ್ಯಗಳಿಗೆ ಬೆರಳಚ್ಚು ನೀಡಲು ಪಿಡಿಒ ಅವರ ಅಗತ್ಯವಿದೆ. ನರೇಗಾ ಕಾಮಗಾರಿ ಅನುಷ್ಠಾನಗೊಳಿಸುವ ಹೊಣೆಗಾರಿಕೆ ಇದೆ. ಈ ಅಂಶಗಳನ್ನು ಗಮನಿಸಿ ಪಿಡಿಒಗಳನ್ನು ಪೂರ್ಣಕಾಲಿಕವಾಗಿ ನಿಯೋಜಿಸಿರುವ ಮತ್ತು ಇನ್ನು ಮುಂದೆ ನಿಯೋಜಿಸಲಾಗುವ ಎಸ್‌ಎಸ್‌ಟಿ ಮತ್ತು ಎಫ್.ಎಸ್.ಟಿ. ತಂಡದಿಂದ ವಿನಾಯಿತಿ ನೀಡಲು ಕೋರಲಾಗಿದೆ.
ಸಾಂದರ್ಭಿಕ, ಅಲ್ಪಾವಧಿಯ ಚುನಾವಣಾ ಜವಾಬ್ದಾರಿಗೆ ನಿಯೋಜಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರು ಮುಖ್ಯ ಚುನಾವಣಾಧಿಕಾರಿಗೆ ಮನವಿ ಮಾಡಿದ್ದಾರೆ.