
ಯಾದಗಿರಿ: ಫಲಾನುಭವಿಗಳಿಂದ ಒಂದು ಸಾವಿರ ರೂಪಾಯಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಪಿಡಿಒ ಸೇರಿ ಮೂವರಿಗೆ ಎರಡು ವರ್ಷ ಜೈಲು ಶಿಕ್ಷೆ, ತಲಾ 10,000 ರೂ. ದಂಡ ವಿಧಿಸಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಯಾದಗಿರಿ ಜಿಲ್ಲೆಯ ತಿಂಥಣಿ ಗ್ರಾಮ ಪಂಚಾಯಿತಿ ಪಿಡಿಒ ರಾಜಶೇಖರ ನಾಯಕ ಅವರು ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗೆ ಆಶ್ರಯ ಮನೆಯ ಎರಡನೇ ಹಂತದ ಚೆಕ್ ನೀಡಲು ಒಂದು ಸಾವಿರ ರೂಪಾಯಿ ಲಂಚ ಕೇಳಿದ ಪ್ರಕರಣದಲ್ಲಿ ಶಿಕ್ಷೆ, ದಂಡ ವಿಧಿಸಲಾಗಿದೆ.
ಪಿಡಿಒಗೆ ಸಹಕರಿಸಿದ ಬಿಲ್ ಕಲೆಕ್ಟರ್ ಭೀಮಣ್ಣ ನಾಯಕ ಮತ್ತು ರಾಘಪ್ಪ ಅವರಿಗೂ ಶಿಕ್ಷೆ ನೀಡಲಾಗಿದೆ. ಹುಣಸಿಹೊಳೆ ಗ್ರಾಮದ ಮರಿಲಿಂಗಪ್ಪ ಅವರಿಂದ ಲಂಚ ಪಡೆಯುವಾಗ ರಾಘಪ್ಪ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಶಿಕ್ಷೆ ಹಾಗೂ ದಂಡ ವಿಧಿಸಿದೆ.