ರಾಯಚೂರು: ರಾಯಚೂರು ಜಿಲ್ಲೆ ಸಿಂಧನೂರು ಪೊಲೀಸರು ಪಿಡಿಒ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಗೊಂದಲ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿದ್ದಾರೆ.
ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಭಾನುವಾರ ನಡೆದ ಪಿಡಿಒ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ಕೆಲವು ಪರೀಕ್ಷಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿ ಗೊಂದಲ ಸೃಷ್ಟಿಸಿದ್ದರು.
ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧ್ಯಕ್ಷಕ ಬಸವರಾಜ್ ತಡಕಲ್ ನೀಡಿದ ದೂರಿನ ಮೇರೆಗೆ 12 ಪರೀಕ್ಷಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಶುಪತಿ ಎಂಬ ಪರೀಕ್ಷಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಪ್ರಶ್ನೆಪತ್ರಿಕೆಗಳನ್ನು ವಿತರಿಸುವ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್ ಮೊದಲೇ ತೆಗೆಯಲಾಗಿದೆ ಎಂದು ಪಶುಪತಿ ಅನುಮಾನ ವ್ಯಕ್ತಪಡಿಸಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಕೂಗಾಡುತ್ತಾ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಇದೇ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದಲ್ಲಿದ್ದ ಬೇರೆ ಅಭ್ಯರ್ಥಿಗಳಿಗೆ ಪ್ರಚೋದನೆ ನೀಡಿ ಕೊಠಡಿಯಿಂದ ಹೊರಗೆ ಕರೆತಂದು ಸಿಂಧನೂರು ಕುಷ್ಟಗಿ ಮುಖ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಪರೀಕ್ಷೆಗೆ ತೊಂದರೆ ಉಂಟು ಮಾಡಿದ್ದಾನೆ.
ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಬಸವರಾಜ್ ತಡಕಲ್ ನೀಡಿದ ದೂರಿನ ಮೇರೆಗೆ ಪಶುಪತಿ, ಸುರಪುರದ ಬಾಬು, ಅಯ್ಯನಗೌಡ, ಅಮಿತ್, ವೆಂಕಟೇಶ್, ರವಿಶಂಕರ್, ವಿಶ್ವಾರಾಧ್ಯ, ಬಸವರಾಜ್, ರಾಘವೇಂದ್ರ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರು ಕೂಡ ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಹೇಳಲಾಗಿದ್ದು, ಸಿಂಧನೂರು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.