ಬೆಂಗಳೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳಿಗೆ ಅನ್ಯ ಇಲಾಖೆ ಕೆಲಸ ವಹಿಸುವಂತಿಲ್ಲ. ಕೆಲಸ ವಹಿಸುವ ಮೊದಲು ಗ್ರಾಮೀಣಾಭಿವೃದ್ಧಿ ಇಲಾಖೆ ಗಮನಕ್ಕೆ ತರುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಅಲ್ಲದೆ, ಕ್ಷೇತ್ರಿಯ ಇಲಾಖೆಗಳು ವಹಿಸಿದ ಕಾರ್ಯಗಳನ್ನು ಹಿಂಪಡೆಯುವಂತೆ ಸೂಚನೆ ನೀಡಲಾಗಿದೆ. ಕಾರ್ಯಭಾರ ಒತ್ತಡದಿಂದ ಅನ್ಯ ಇಲಾಖೆ ಕೆಲಸದ ಹೊರೆ ಹೊರೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ಇತ್ತೀಚೆಗೆ ಬೇರೆ ಬೇರೆ ಇಲಾಖೆಗಳು ವಿವಿಧ ಕಾರ್ಯಗಳ ಮೇಲುಸ್ತುವಾರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ಗಮನಕ್ಕೆ ತಾರದೆ ಪಿಡಿಒಗಳಿಗೆ ಹೆಚ್ಚುವರಿ ಕಾರ್ಯಭಾರ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಭಾರತ ಸರ್ಕಾರದ ಅನೇಕ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅವುಗಳ ಕಾರ್ಯಭಾರವೇ ಸಾಕಷ್ಟು ಇದೆ. ಪಿಡಿಒಗಳಿಗೆ ಬೇರೆ ಕ್ಷೇತ್ರೀಯ ಇಲಾಖೆಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸೂಚಿಸುವುದಾಗಲಿ ಅಥವಾ ಮೇಲುಸ್ತುವಾರಿ ನೀಡುವ ಮೊದಲು ಸರ್ಕಾರದಿಂದ ಗಮನಕ್ಕೆ ತರುವಂತೆ ಆಯುಕ್ತಾಲಯ ಸೂಚಿಸಿದೆ.
ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದಲೂ ಈ ಬಗ್ಗೆ ಸುತ್ತೋಲೆ ಹೊರಡಿಸಲು ಮನವಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಪಿಡಿಒಗಳಿಗೆ ಅನ್ಯ ಇಲಾಖೆ ಕೆಲಸ ವಹಿಸುವಂತಿಲ್ಲ ಎಂದು ಸುತ್ತೋಲೆ ಹೊರಡಿಸಲಾಗಿದೆ.