
ಬೆಳಗಾವಿ: ಕಿಣಿಯೇ ಗ್ರಾಮ ಪಂಚಾಯಿತಿ ಪಿಡಿಓ ಮೇಲೆ ದರ್ಪ ಮೆರೆದಿದ್ದ ಮರಾಠಿ ಪುಂಡನಿಗೆ ಎಂಇಎಸ್ ಮುಖಂಡರು ಸನ್ಮಾನ ಮಾಡುವ ಮೂಲಕ ಉದ್ಧಟತನ ಮೆರೆದಿರುವ ಘಟಟನೆ ಬೆಳಗಾವಿಯಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ಪಿಡಿಒ ನಾಗೇಂದ್ರ ಪತ್ತಾವರ ಎಂಬುವವರ ಮೇಲೆ ಮರಾಠಿ ಪುಂಡ ತಿಪ್ಪಣ್ಣ ಡೋಕ್ರೆ ಎಂಬಾತ ಮರಾಠಿಯಲ್ಲಿ ಮಾತನಾಡುವಂತೆ, ಮರಾಠಿಯಲ್ಲಿ ದಾಖಲೆಗಳನ್ನು ಕೊಡುವಂತೆ ಧಮ್ಕಿ ಹಾಕಿ ಆವಾಜ್ ಹಾಕಿದ್ದ. ಪಿಡಿಓ ಮೇಲೆ ಮರಾಠಿ ಪುಂಡನ ದಬ್ಬಾಳಿಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿತ್ತು.
ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ತಿಪಣ್ಣ ಡೋಕ್ರೆಯನ್ನು ಬಂದಿಸಿ ಹಿಂಡಾಗಾ ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿ ತಿಪ್ಪಣ್ಣ ಡೋಕ್ರೆ ಹೊರ ಬಂದಿದ್ದಾನೆ.
ಜೈಲಿನಿಂದ ಹೊರ ಬರುತ್ತಿದ್ದಂತೆ ಆತನ ಮನೆಗೆ ತೆರಳಿರುವ ಎಂಇಎಸ್ ಮುಖಂಡ ಶುಭಂ ಶಳ್ಕೆ ಹಾಗೂ ಇತರರು ಮರಾಠಿ ಪುಂಡನನ್ನು ಸನ್ಮಾನ ಮಾಡಿದ್ದಾರೆ. ಎಂಇಎಸ್, ಶಿವಸೇನೆ ಪುಂಡಾಟ, ಹಲ್ಲೆ ಪ್ರಕರಣ ಖಂಡಿಸಿ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳು ಇಡೀ ಬೆಳಗಾವಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಎಂಇಎಸ್ ಮುಖಂಡರು ಮರಾಠಿ ಪುಂಡನನ್ನು ಸನ್ಮಾನಿಸಿ ಉದ್ಧಟತನ ಮೆರೆದಿದ್ದು, ಕನ್ನಡಪರ ಹೋರಾಟಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.