ಸರ್ಕಾರದ ಯೋಜನೆಗಳಿಗೆ, ಕೈಗಾರಿಕೆಗಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಭೂ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ರೈತರು ಪರಿಹಾರ ಪಡೆದುಕೊಳ್ಳುವ ಪ್ರಕರಣ ಸಾವಿರಾರು ಇವೆ. ಇನ್ನು ಮುಂದೆ ಈ ರೀತಿ ನಡೆಯಕೂಡದು ಎಂದು ಸರ್ಕಾರ ಅಧಿಕಾರಿಗಳಿಗೆ ಎಚ್ಚರಿಸಿದೆ.
ರೈತರ ಭೂಕಂದಾಯ ದಾಖಲೆಗಳು ಕಾನೂನಾತ್ಮಕವಾಗಿದ್ದರೆ, ಕೆಐಎಡಿಬಿಯಿಂದ ಸ್ವಾಧೀನಮಾಡಿಕೊಂಡ ಜಮೀನುಗಳಿಗೆ ಮೂರು ತಿಂಗಳಲ್ಲಿ ಪರಿಹಾರ ನೀಡಬೇಕು ಎಂದು ಬೃಹತ್ ಮತ್ತು ಮಧ್ಯಮ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೆಲವು ಕಡೆ ಜಮೀನನ್ನು ಸ್ವಾಧೀನಪಡಿಸಿಕೊಂಡರೂ ರೈತರಿಗೆ ಪರಿಹಾರ ನೀಡದೆ ವಿಳಂಬ ಮಾಡಲಾಗಿದೆ ಎಂಬ ಆರೋಪವಿದೆ. ದಾಖಲೆಗಳು ಸರಿ ಇದ್ದರೆ, 90 ದಿನದೊಳಗೆ ಪರಿಹಾರ ನೀಡಲು ಇರುವ ಸಮಸ್ಯೆಯಾದರೂ ಏನು ಎಂದು ಇಲಾಖೆಯ ಪ್ರಗತಿಪರಿಶೀಲನಾ ಸಭೆಯಲ್ಲಿ ಪ್ರಶ್ನಿಸಿದ್ದಾರೆ.
ಆಗಸ್ಟ್ 15 ರೊಳಗೆ ವಾಣಿಜ್ಯ ಕೈಗಾರಿಕಾ ಇಲಾಖೆ ವ್ಯಾಪ್ತಿಗೆ ಒಳಪಡುವ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳನ್ನು ಇ-ಕಚೇರಿ ವ್ಯವಸ್ಥೆಗಳನ್ನಾಗಿ ಪರಿವರ್ತನೆ ಮಾಡಬೇಕು. ಒಂದು ವೇಳೆ ಆಗಸ್ಟ್ 15ರೊಳಗೆ ಜಿಲ್ಲಾ ಮಟ್ಟದ ಕಚೇರಿಗಳನ್ನು ಇ ಕಚೇರಿ ವ್ಯವಸ್ಥೆಗಳನ್ನಾಗಿ ಪರಿವರ್ತನೆ ಮಾಡದೇ ಇದ್ದರೆ ಮುಖ್ಯ ಕಚೇರಿಗೆ ಬರುವ ಭೌತಿಕ ಕಡತ ಸ್ವೀಕಾರ ಮಾಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಕಂಪ್ಯೂಟರ್ ಇಲ್ಲ, ಸಿಬ್ಬಂದಿ ಇಲ್ಲ, ಕಚೇರಿ ಇಲ್ಲ ಇಂತಹ ಸಬೂಬುಗಳನ್ನು ಹೇಳಬಾರದು. ಇದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಇಂದಿನಿಂದಲೇ ತಯಾರು ಮಾಡಿಕೊಳ್ಳಿ. ಇಲ್ಲದಿದ್ದರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಿಂದ ಬರುವ ಭೌತಿಕ ಕಡತಗಳನ್ನು ಹಿಂದಕ್ಕೆ ಕಳುಹಿಸುವುದಾಗಿ ಅಧಿಕಾರಿಗಳನ್ನು ಸಚಿವರು ಎಚ್ಚರಿಸಿದರು.
ಸಣ್ಣಪುಟ್ಟ ದೋಷಗಳನ್ನು ಮುಂದಿಟ್ಟುಕೊಂಡು ಕಡತ ವಿಲೇವಾರಿಯನ್ನು ವಿಳಂಬ ಮಾಡಬೇಡಿ. ವಿಳಂಬ ಮಾಡಿದರೆ ಉದ್ದಿಮೆದಾರರು ಕರ್ನಾಟಕಕ್ಕೆ ಬರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ಕೆಐಎಡಿಬಿಯಿಂದ ಜಮೀನು ಪಡೆದುಕೊಂಡು ಕೈಗಾರಿಕೆಗಳನ್ನು ಸ್ಥಾಪನೆ ಮಾಡದೇ ಹಾಗೆ ಉಳಿಸಿಕೊಂಡಿದ್ದಾರೆ. ಅಂತಹ ಜಮೀನನ್ನು ತಕ್ಷಣವೇ ಗುರುತಿಸಬೇಕು. ಬಳಕೆಯಾಗದ ಭೂಮಿಯನ್ನು ನಾವು ಮುಲಾಜಿಲ್ಲದೇ ಹಿಂಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿದ್ದ ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ್, ಇತ್ತೀಚೆಗೆ ಸಣ್ಣ ಕೈಗಾರಿಕೆ ಇಲಾಖೆಗೂ ಭೂಮಿ ನೀಡುವಂತೆ ಮನವಿ ಬಂದಿದೆ. ಕೆಎಐಡಿಬಿಯಲ್ಲಿ ನಮಗೆ ಜಮೀನು ನೀಡಬೇಕೆಂದು ಮನವಿ ಮಾಡಿದರು.