ಬೆಳಗಾವಿ(ಸುವರ್ಣಸೌಧ): ಸರ್ಕಾರಿ ಇಲಾಖೆಗಳ ಕಾಮಗಾರಿ ನಿರ್ವಹಿಸಿದ ರಾಜ್ಯದ ಗುತ್ತಿಗೆದಾರರಿಗೆ ಹಣ ಪಾವತಿಸದೆ ಕಡೆಗಣಿಸಲಾಗುತ್ತಿದೆ. ಹೊರ ರಾಜ್ಯದ ಗುತ್ತಿಗೆದಾರರ ಬಿಲ್ ಗಳನ್ನು ಮಂಜೂರು ಮಾಡಲು ಸರ್ಕಾರ ಆಸಕ್ತಿ ತೋರಿಸುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಮಾತನಾಡಿದ ಯತ್ನಾಳ್, ರಾಜ್ಯ ಸರ್ಕಾರ ರಾಜ್ಯದ ಗುತ್ತಿಗೆದಾರರನ್ನು ಕಡೆಗಣಿಸುತ್ತಿದ್ದು, ಬಿಲ್ ಬಾಕಿ ಉಳಿದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ.
ಹಿಂದೆ ನಮ್ಮ ಸರ್ಕಾರದ ವಿರುದ್ಧ 40% ಆರೋಪ ಕೇಳಿ ಬಂದಿತ್ತು. ಈ ಸರ್ಕಾರ 80% ಆಗಿದೆ. ಈ ಸರ್ಕಾರ ಪೇ ಡಿಸಿಎಂ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಲ ಮಾಡಿ ಕಾಮಗಾರಿ ನಡೆಸಿದ ಗುತ್ತಿಗೆದಾರರ ಆಸ್ತಿ ಜಪ್ತಿ ಆಗುತ್ತಿವೆ. ಸರ್ಕಾರ ಬಾಕಿ ಬಿಲ್ ಪಾವತಿಸದಿರುವುದರಿಂದ ಗುತ್ತಿಗೆದಾರರು ಜಿಎಸ್‌ಟಿ ಕೂಡ ಕಟ್ಟಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. 1,200 ಕೋಟಿ ರೂ. ಜಿಎಸ್‌ಟಿ ಬಾಕಿ ಇದ್ದು, ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಎಲ್ಓಸಿ ಬಿಡುಗಡೆಗೆ ಶೇಕಡ 7ರಷ್ಟು, ಟೆಂಡರ್ ಅಂತಿಮಗೊಳಿಸಲು ಶೇಕಡ 15ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಇದೊಂದು ಭ್ರಷ್ಟ ಸರ್ಕಾರ, ಪೇ ಡಿಸಿಎಂ ಸರ್ಕಾರ ಆಗಿದೆ ಎಂದು ಆರೋಪಿಸಿದ್ದಾರೆ.