ವಿಶಾಖಪಟ್ಟಣಂ: ಆಂಧ್ರಪ್ರದೇಶದಲ್ಲಿ ಜನ ಸೇನಾ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ವಿಶಾಖಪಟ್ಟಣಂನಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ.
15 ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಬಗ್ಗೆ ನಟ ಹಾಗೂ ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನವಾಣಿ ಸಮಾವೇಶಕ್ಕೆ ಅನುಮತಿ ಕೇಳಲು ಹೋಗಿದ್ದಕ್ಕೆ ಕೇಸ್ ದಾಖಲಿಸಲಾಗಿದೆ. ಕಾರ್ಯಕರ್ತರ ವಿರುದ್ಧ ಹತ್ಯೆ ಯತ್ನದ ಕೇಸ್ ಹಾಕಿದ್ದಾರೆ ಎಂದು ದೂರಿದ್ದಾರೆ.
ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ(ವೈಎಸ್‌ಆರ್‌ಸಿ) ನಾಯಕಿ ಆರ್.ಕೆ. ರೋಜಾ ಅವರ ಕಾರಿನ ಮೇಲೆ ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಬೆಂಬಲಿಗರು ನಿನ್ನೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದ ಹೊರಗೆ ದಾಳಿ ನಡೆಸಿದ್ದಾರೆ. ಜೋಗಿ ರಮೇಶ್ ಮತ್ತು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಅವರ ವಾಹನಗಳ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿರುವ ರೋಜಾ ಅವರು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪ್ರಸ್ತಾಪಿಸಿದ ಮೂರು ರಾಜಧಾನಿ ಯೋಜನೆಯನ್ನು ಬೆಂಬಲಿಸುವ ರ್ಯಾಲಿಯಲ್ಲಿ ಭಾಗವಹಿಸಲು ವೈಜಾಗ್ ಗೆ ಹಿಂತಿರುಗುತ್ತಿದ್ದರು.
ದಾಳಿಯಲ್ಲಿ ರೋಜಾ ಅವರ ಚಾಲಕನ ತಲೆಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದಾಳಿ ನಡೆಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ
ಜನಸೇನಾ ಕಾರ್ಯಕರ್ತರು ಮತ್ತು ಪವನ್ ಕಲ್ಯಾಣ್ ಬೆಂಬಲಿಗರು ತಮ್ಮ ನಾಯಕನನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಪವನ್ ಕಲ್ಯಾಣ್ ಮೇಲೆ ರಾಜ್ಯ ಸಚಿವರು ಮತ್ತು ವೈಎಸ್‌ಆರ್‌ಸಿಪಿ ನಾಯಕರು ನಡೆಸಿದ ಮಾತಿನ ದಾಳಿಯಿಂದ ಅವರು ಕೋಪಗೊಂಡಿದ್ದರು ಎಂದು ವರದಿಯಾಗಿದೆ.