ಇತ್ತೀಚೆಗೆ ಬಿಡುಗಡೆಯಾಗಿರುವ ‘ದಿ ಕೇರಳ ಸ್ಟೋರಿ’ ಮತಾಂತರದ ಕುರಿತ ಕಥೆಯನ್ನು ಹೊಂದಿತ್ತು. ಈ ಚಿತ್ರಕ್ಕೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದ್ದು, ಇನ್ನು ಪಶ್ಚಿಮ ಬಂಗಾಳ ಸರ್ಕಾರ ಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸಿದ್ದನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿತ್ತು.
ಈ ಚಿತ್ರ ನೈಜ ಕಥೆಯಾಧಾರಿತ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಇದನ್ನು ಉಲ್ಲೇಖಿಸಿ ಹಿಂದೂ ಸಂಘಟನೆಗಳು ‘ಲವ್ ಜಿಹಾದ್’ ನಡೆಯುತ್ತಿದೆ ಎಂದು ಆರೋಪಿಸಿದ್ದವು. ಇದರ ಮಧ್ಯೆ ಬಿಜೆಪಿ ಮುಖಂಡರೊಬ್ಬರ ಪುತ್ರಿ, ಮುಸ್ಲಿಂ ಯುವಕನ ಜೊತೆ ಮದುವೆಯಾಗುತ್ತಿದ್ದು ಇದರ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಜಿ ಶಾಸಕ ಹಾಗೂ ಉತ್ತರಾಖಂಡದ ಪೌರಿ ಕ್ಷೇತ್ರದ ಬಿಜೆಪಿ ನಾಯಕ ಯಶ್ ಪಾಲ್ ಬೇನಂ ಅವರ ಪುತ್ರಿ ಮೋನಿಕಾ, ಅಮೇಥಿಯ ರಹೀಸ್ ಅಹಮದ್ ಎಂಬವರ ಪುತ್ರ ಮೋನಿಸ್ ಜೊತೆ ಮೇ 28ರಂದು ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ. ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ಈ ವಿವಾಹ ಸಮಾರಂಭ ನಡೆಯುತ್ತಿದೆ.
ಈ ವಿವಾಹದ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ತೀವ್ರವಾಗಿ ಖಂಡಿಸುತ್ತಿರುವ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಮುಖಂಡರು ಇಬ್ಬಂದಿತನ ಪ್ರದರ್ಶನ ಮಾಡುತ್ತಿದ್ದಾರೆ. ಒಂದು ಕಡೆ ಲವ್ ಜಿಹಾದ್ ಎಂದು ಹೇಳಿ ಮತ್ತೊಂದು ಕಡೆ ಪುತ್ರಿಯ ವಿವಾಹವನ್ನು ಮುಸ್ಲಿಂ ಯುವಕನೊಂದಿಗೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ವಿಷಯ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಯಶ್ ಪಾಲ್ ಬೇನಂ, ಇದು 22 ನೇ ಶತಮಾನವಾಗಿದ್ದು, ನಮ್ಮ ಮಕ್ಕಳು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಹೊಂದಿದ್ದಾರೆ. ಅವರ ಮುಂದಿನ ಬದುಕು ಸುಂದರವಾಗಿರಲು ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ ಈ ವಿವಾಹ ನಡೆಯುತ್ತಿದೆ ಎಂದು ಹೇಳಿದ್ದಾರೆ.