ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ಲಕ್ಷ್ಯದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಲಾಗಿದೆ. ಗೋಪಾಲ್ಗಂಜ್ ನಂತರ, ಈಗ ಪಾಟ್ನಾದ ಎಸ್ಎಸ್ಪಿ ರಾಜಧಾನಿಯಲ್ಲಿ ನಿಯೋಜಿಸಲಾದ ಸುಮಾರು 500 ಪೊಲೀಸರ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ.
ಇವರುಗಳು ತಮ್ಮ ನಿಯೋಜನೆಯ ಸಮಯದಲ್ಲಿ ಕೇಸುಗಳ ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ಪೊಲೀಸರಾಗಿದ್ದು, ಆದರೆ ವರ್ಗಾವಣೆಯಾದಾಗ ಕೇಸುಗಳನ್ನು ಹಸ್ತಾಂತರಿಸಿಲ್ಲ. ಇದರಿಂದಾಗಿ ಈ ಪ್ರಕರಣಗಳು ಬಾಕಿ ಉಳಿಯುತ್ತಾ ಹೋಗಿವೆ.
ಅಂತಹ ತನಿಖಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಎಸ್ಎಸ್ಪಿ ಆದೇಶಿಸಿದ್ದಾರೆ. ಮಾಹಿತಿಯ ಪ್ರಕಾರ, ರಾಜಧಾನಿ ಪಾಟ್ನಾದ ಎಸ್ಎಸ್ಪಿ ಅವಕಾಶ್ ಕುಮಾರ್ ಸೋಮವಾರ ಕ್ರೈಮ್ ಮೀಟಿಂಗ್ ಕರೆದಿದ್ದು, ಐದು ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಈ ಮ್ಯಾರಥಾನ್ ಸಭೆಯಲ್ಲಿ, ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಠಾಣಾ ಉಸ್ತುವಾರಿಗಳು ಮತ್ತು ತನಿಖಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಈ ವೇಳೆ, ವಿವಿಧ ಪೊಲೀಸ್ ಠಾಣೆಗಳಲ್ಲಿ ನಿಯೋಜಿಸಲಾಗಿದ್ದ 400 ರಿಂದ 500 ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ವರ್ಗಾವಣೆಯಾಗಿದ್ದರೂ, ಈ ಪೊಲೀಸರು ಪ್ರಕರಣವನ್ನು ಹಸ್ತಾಂತರಿಸಿಲ್ಲ. ಇದರಿಂದಾಗಿ, ಅವರು ತೆರಳಿದ ನಂತರ, ಈ ಪ್ರಕರಣಗಳನ್ನು ಬೇರೆ ಯಾವುದೇ ಅಧಿಕಾರಿಗೆ ವರ್ಗಾಯಿಸಲು ಸಾಧ್ಯವಾಗಿಲ್ಲ. ಅಂತಹ ಸಂದರ್ಭಗಳಲ್ಲಿ, ಈ ಎಲ್ಲಾ ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ. ಈ ಮಾಹಿತಿ ಪಡೆದ ಎಸ್ಎಸ್ಪಿ ಅಸಮಾಧಾನ ವ್ಯಕ್ತಪಡಿಸಿ ಅಂತಹ ಪೊಲೀಸರ ವಿರುದ್ದ ಪ್ರಕರಣ ದಾಖಲಿಸಲು ಆದೇಶಿಸಿದ್ದಾರೆ.