ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಜನಸಾಮಾನ್ಯರು ವಾಹನ ಮುಟ್ಟಿದ್ರೆ ಕೈ ಸುಡ್ತಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದ ಕೆಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಲೀಟರ್ ಆಗಿದೆ. ಆದ್ರೆ ನೆರೆಯ ನೇಪಾಳದಲ್ಲಿ ಪೆಟ್ರೋಲ್ ಭಾರತಕ್ಕಿಂತ 23 ರೂಪಾಯಿ ಕಡಿಮೆಗೆ ಮಾರಾಟವಾಗ್ತಿದೆ. ಇದು ಬಿಹಾರ- ನೇಪಾಳದ ಗಡಿಯಲ್ಲಿ ಪೆಟ್ರೋಲ್ ಕಳ್ಳಸಾಗಣೆಗೆ ದಾರಿ ಮಾಡಿಕೊಟ್ಟಿದೆ.
ಪಶ್ಚಿಮ ಚಂಪಾರಣ್‌ನ ಗಡಿ ಪ್ರದೇಶಗಳಿಂದ ಪೆಟ್ರೋಲ್ ಕಳ್ಳಸಾಗಣೆ ವರದಿಯಾಗಿದೆ. ಇಂಡೋ-ನೇಪಾಳ ಗಡಿಯಲ್ಲಿರುವ ಊರುಗಳ ಮೂಲಕ ನೇಪಾಳದಿಂದ ಭಾರತಕ್ಕೆ ಡೀಸೆಲ್ ಮತ್ತು ಪೆಟ್ರೋಲ್ ಕಳ್ಳಸಾಗಣೆ ಮಾಡಲಾಗುತ್ತಿದೆ. ನೇಪಾಳದಲ್ಲಿ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಭಾರತಕ್ಕಿಂತ ತೀರಾ ಕಡಿಮೆ. ಕಳ್ಳಸಾಗಾಣಿಕೆದಾರರು ಸೈಕಲ್ ಮತ್ತು ಬೈಕ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಕಳ್ಳಸಾಗಣೆ ಮಾಡುತ್ತಿದ್ದಾರೆ. ಇದು ಭಾರತದ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ. ಪ್ರತಿದಿನ ನೂರಾರು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಕಳ್ಳಸಾಗಣೆ ನಡೆಯುತ್ತಿದ್ದು, ನೇಪಾಳದಿಂದ ತಂದು ಪೆಟ್ರೋಲ್-ಡೀಸೆಲನ್ನು ಸ್ಥಳೀಯರಿಗೆ ಮಾರಾಟ ಮಾಡಲಾಗ್ತಿದೆ. ಗಡಿಯಲ್ಲಿ ಹೆಚ್ಚಿನ ಭದ್ರತೆಯಿಲ್ಲದ ಕಾರಣ ಕಳ್ಳಸಾಗಾಣಿಕೆದಾರರು ಸುಲಭವಾಗಿ ಕಳ್ಳಸಾಗಣೆ ಮಾಡುತ್ತಾರೆ.
ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ. ನೇಪಾಳದಲ್ಲಿ ಡೀಸೆಲ್ ಪ್ರತಿ ಲೀಟರ್‌ಗೆ 94 ರೂಪಾಯಿ 20 ಪೈಸೆ ಮತ್ತು ಪೆಟ್ರೋಲ್ 111 ರೂಪಾಯಿ 20 ಪೈಸೆಗೆ ಮಾರಾಟವಾಗ್ತಿದೆ. ಭಾರತೀಯ ಕರೆನ್ಸಿಯಲ್ಲಿ ಇದರ ಬೆಲೆ ಲೀಟರ್‌ಗೆ 58 ರೂಪಾಯಿ 88 ಪೈಸೆ ಮತ್ತು 69 ರೂಪಾಯಿ 50 ಪೈಸೆ. ಭಾರತದಲ್ಲಿ ಡೀಸೆಲ್ ಲೀಟರ್‌ಗೆ 85 ರೂಪಾಯಿ 70 ಪೈಸೆ ಮತ್ತು ಪೆಟ್ರೋಲ್ 92 ರೂಪಾಯಿ 51 ಪೈಸೆ ಮಾರಾಟವಾಗ್ತಿದೆ.