ವಿಜಯಪುರ: ಮದ್ಯದ ನಶೆಯಲ್ಲಿ ಸಿಬ್ಬಂದಿ ಡಯಾಲಿಸಿಸ್ ಮಾಡಿ ಉಪಕರಣ ಕಿತ್ತು ಹಾಕಿದ್ದರಿಂದ ರಕ್ತಸ್ರಾವಗೊಂಡು ರೋಗಿ ಮೃತಪಟ್ಟಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ರೊಚ್ಚಿಗೆದ್ದ ಜನ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಇಂಡಿ ತಾಲೂಕು ಮಾವಿನಹಳ್ಳಿಯ ಬಿಸ್ಮಿಲ್ಲಾ ನದಾಫ್(42) ಮೃತಪಟ್ಟ ಮಹಿಳೆ. ಬೆಳಗ್ಗೆ 8 ಗಂಟೆಗೆ ಡಯಾಲಿಸಿಸ್ ಮಾಡಿಸಿಕೊಳ್ಳಲು ಅವರು ಆಸ್ಪತ್ರೆಗೆ ಬಂದಿದ್ದಾರೆ. ಒಂದು ಗಂಟೆ ಕಾದರೂ ಕೂಡ ಡಯಾಲಿಸಿಸ್ ವಿಭಾಗದ ಟೆಕ್ನಿಷಿಯನ್ ಬಂದಿರಲಿಲ್ಲ.
ನಂತರ ಬಂದ ಟೆಕ್ನಿಷಿಯನ್ ಬಸವರಾಜ ವಿಪರೀತ ಮದ್ಯ ಸೇವಿಸಿದ್ದನ್ನು ಗಮನಿಸಿದ ರೋಗಿಯ ಕಡೆಯವರು ಡಯಾಲಿಸಿಸ್ ಬೇಡ ಎಂದು ಹೇಳಿದ್ದಾರೆ. ಸುಮ್ಮನಿರುವಂತೆ ಹೇಳಿದ ಬಿಸ್ಮಿಲ್ಲಾ ಕೈಗೆ ಡಯಾಲಿಸಿಸ್ ಉಪಕರಣಗಳನ್ನು ಜೋಡಿಸಿದ್ದು, ಸರಿಯಾಗಿ ಜೋಡಿಸಿದ ಕಾರಣ ರಕ್ತ ಹೊರ ಬಂದಿದೆ. ನಂತರ ಬಸವರಾಜ ಕೈಗೆ ಹಾಕಿದ್ದ ಉಪಕರಣಗಳನ್ನು ಕಿತ್ತೆಸೆದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವಗೊಂಡು ಮಹಿಳೆ ಅಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ.
ರೋಗಿ ಮೃತಪಟ್ಟು ಎರಡು ಗಂಟೆಯಾದರೂ ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಲಾಗಿದೆ. ಇಂಡಿ ವಿಜಯಪುರ ರಸ್ತೆ ತಡೆದು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಪೊಲೀಸರು ಬಸವರಾಜನನ್ನು ಬಂಧಿಸಿದ್ದಾರೆ.