ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಬಿಡುಗಡೆಗೆ ಎಲ್ಲ ಸಿದ್ಧತೆ ನಡೆದಿದ್ದು, ಇದರ ಮಧ್ಯೆ ಚಿತ್ರದಲ್ಲಿರುವ ‘ಬೇಶರಮ್ ರಂಗ್’ ಹಾಡು ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಉಡುಪು ಧರಿಸಿದ್ದು, ಇದನ್ನು ತೆಗೆಯುವಂತೆ ಒತ್ತಾಯಿಸಲಾಗುತ್ತಿದೆ.
ಇದರ ಮಧ್ಯೆ ತೃಣಮೂಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಿಜು ದತ್ತಾ 1998ರಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಮೃತಿ ಇರಾನಿಯವರು ಸ್ವಿಮ್ ಸೂಟ್ ಧರಿಸಿ ಪಾಲ್ಗೊಂಡಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದೀಗ ಬಿಜೆಪಿ ಹಾಗೂ ಟಿಎಂಸಿ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ.
ರಿಜು ದತ್ತಾ ಅವರ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ, ಟಿಎಂಸಿ ನಾಯಕನಿಗೆ ಮಹಿಳೆಯರ ಬಗ್ಗೆ ಗೌರವ ಇಲ್ಲ. ಆ ಪಕ್ಷದ ಉನ್ನತ ನಾಯಕಿ ಮಮತಾ ಬ್ಯಾನರ್ಜಿ ಓರ್ವ ಮಹಿಳೆ ಎಂಬುದನ್ನು ಅವರು ಮರೆತಂತಿದೆ ಎಂದು ಟೀಕಿಸಿದ್ದಾರೆ.
ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿರುವ ರಿಜು ದತ್ತಾ, ಬಿಜೆಪಿ ದ್ವಿಮುಖ ನೀತಿಯನ್ನು ಪಾಲಿಸುತ್ತಿದೆ. ದೀಪಿಕಾ ಪಡುಕೋಣೆಗೆ ಒಂದು ನ್ಯಾಯ. ಸ್ಮೃತಿ ಇರಾನಿ ಅವರಿಗೆ ಒಂದು ನ್ಯಾಯ ಎಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.