ಬೆಂಗಳೂರು: ಕೃಷ್ಣರಾಜನಗರ ನಿಲ್ದಾಣದ ರಸ್ತೆ ಸಂಖ್ಯೆ 2ರ ಎರಡೂ ಬದಿಯಲ್ಲಿ ಟ್ರ್ಯಾಕ್ ಮೆಷಿನ್ ಸೈಡಿಂಗ್ ನಿಯೋಜಿಸಲು ಇಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.
ಜನವರಿ 28ರಂದು ರೈಲು ಸಂಖ್ಯೆ 16225 ಮೈಸೂರು -ಶಿವಮೊಗ್ಗ ಟೌನ್ ಡೈರಿ ಎಕ್ಸ್ಪ್ರೆಸ್ ರೈಲು ಮೈಸೂರಿನ ಬದಲು ಹಾಸನದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಈ ರೈಲು ಮೈಸೂರು ಮತ್ತು ಹಾಸನ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
ಜನವರಿ 29ರಂದು ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್ -ಮೈಸೂರು ಡೈಲಿ ಎಕ್ಸ್ಪ್ರೆಸ್ ರೈಲು ಹಾಸನ ಮತ್ತು ಮೈಸೂರು ನಡುವೆ ಭಾಗಶಃ ರದ್ದಾಗಿದ್ದು, ಈ ರೈಲು ಹಾಸನದಲ್ಲಿ ಕೊನೆಗೊಳ್ಳುತ್ತದೆ.
ಜನವರಿ 26ರಂದು ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲು ಸಂಖ್ಯೆ 16221 ತಾಳಗುಪ್ಪ- ಮೈಸೂರು ಕುವೆಂಪು ಡೈಲಿ ಎಕ್ಸ್ಪ್ರೆಸ್ ಮತ್ತು ರೈಲು ಸಂಖ್ಯೆ 16222 ಮೈಸೂರು -ತಾಳಗುಪ್ಪ ಕುವೆಂಪು ಡೈಲಿ ಎಕ್ಸ್ಪ್ರೆಸ್ ರೈಲುಗಳನ್ನು ಮಾರ್ಗ ಮಧ್ಯದಲ್ಲಿ 45 ನಿಮಿಷಗಳ ಕಾಲ ಸಂಚಾರ ನಿಯಂತ್ರಿಸಲಾಗುವುದು ಎಂದು ಹೇಳಲಾಗಿದೆ.