ಜನವರಿ 2022ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಇಳಿಮುಖ ಕಂಡಿದ್ದು, ಆಟೋಮೊಬೈಲ್ ಕಂಪನಿಗಳ ರೀಟೇಲ್ ಮಾರಾಟದಲ್ಲಿ, ಜನವರಿ 2021ಕ್ಕೆ ಹೋಲಿಸಿದಲ್ಲಿ, ಕಳೆದ ತಿಂಗಳು 10.7 ಪ್ರತಿಶತ ಇಳಿಕೆ ದಾಖಲಾಗಿದೆ ಎಂದು ಆಟೋಮೊಬೈಲ್ ಮಾರಾಟಗಾರರ ಸಂಘಟನೆ (ಫಾಡಾ) ತಿಳಿಸಿದೆ. ದೇಶಾದ್ಯಂತ 26,000+ ಆಟೋ ಡೀಲರ್‌ಗಳು ಸೇರಿಕೊಂಡು ಫಾಡಾ ಸಂಘಟನೆ ಕಟ್ಟಿಕೊಂಡಿದ್ದಾರೆ.
ವರ್ಷದಿಂದ ವರ್ಷಕ್ಕೆ ತುಲನೆ ಮಾಡಿ ನೋಡಿದಾಗ, ತ್ರಿಚಕ್ರ ಹಾಗೂ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕ್ರಮವಾಗಿ 30 ಪ್ರತಿಶತ ಹಾಗೂ 20.5 ಪ್ರತಿಶತದಷ್ಟು ಹೆಚ್ಚಳ ಕಂಡು ಬಂದಿದೆ. ಇದೇ ವೇಳೆ, ದ್ವಿಚಕ್ರ, ಪ್ರಯಾಣಿಕ ವಾಹನಗಳು ಹಾಗೂ ಟ್ರಾಕ್ಟರ್‌ಗಳ ಮಾರಾಟದಲ್ಲಿ ಕ್ರಮವಾಗಿ 13%, 10% ಮತ್ತು 10%ನಷ್ಟು ಇಳಿಕೆ ದಾಖಲಾಗಿದೆ. ಸೆಮಿ ಕಂಡಕ್ಟರ್‌ಗಳ ಕೊರತೆ ಕಾರಣದಿಂದಾಗಿ ಪ್ರಯಾಣಿಕ ವಾಹನಗಳ ಅಲಭ್ಯತೆ ಮಾರುಕಟ್ಟೆಯಲ್ಲಿ ಎದ್ದು ಕಾಣುತ್ತಿದೆ.
ಕೊರೋನಾ ಎಫೆಕ್ಟ್: ವರ್ಷದ ಕೊನೆಯಲ್ಲಿ ಭಾರಿ ಇಳಿಕೆ ಕಂಡ ಆಟೋಮೊಬೈಲ್ ಕ್ಷೇತ್ರ..!
ವಾಣಿಜ್ಯ, ಅದರಲ್ಲೂ ಭಾರೀ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಏರುಗತಿ ಕಂಡರೂ ಸಹ ದ್ವಿಚಕ್ರ ವಾಹನಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆಯಲ್ಲಿ ಕಡಿಮೆಯಾಗಿರುವುದು ಕಾಣುತ್ತಿದೆ. ಬೆಲೆ ಏರಿಕೆ ಹಾಗೂ ಓಮಿಕ್ರಾನ್ ಕಾಟದಿಂದಾಗಿ ದ್ವಿಚಕ್ರ ವಾಹನಗಳಿಗೆ ಬೇಡಿಕೆ ತಗ್ಗಿದೆ ಎನ್ನುತ್ತಾರೆ ಫಾಡಾ ಅಧ್ಯಕ್ಷ ವಿಂಕೇಶ್ ಗುಲಾಟಿ.
ಕೋವಿಡ್ ಮೂರನೇ ಅಲೆಯಿಂದ ಭಾರತ ನಿಧಾನವಾಗಿ ಚೇತರಿಕೆಯ ಹಾದಿ ಹಿಡಿಯುತ್ತಲೇ ಆಟೋ ರೀಟೇಲ್ ಕ್ಷೇತ್ರದಲ್ಲಿ ಹಂತ ಹಂತದ ಚೇತರಿಕೆ ಕಾಣುವ ನಿರೀಕ್ಷೆಯಿದೆ ಎನ್ನುತ್ತಾರೆ ಗುಲಾಟಿ.