ನಂಬಿದ್ರೆ ನಂಬಿ ಬಿಟ್ರೆ ಬಿಡಿ…! 20 ರೂ. ʼಟೀʼ ಗೆ 50 ರೂಪಾಯಿ ತೆರಿಗೆ 01-07-2022 9:54AM IST / No Comments / Posted In: Latest News, India, Live News ರೈಲಿನಲ್ಲಿ ಪ್ರಯಾಣ ಮಾಡುವಾಗ ಟೀ, ಕಾಫಿ ಕುಡಿಯಬೇಕೆಂದಿದ್ದರೆ ನಿಮ್ಮ ಕಿಸೆಯಲ್ಲಿ ಹೆಚ್ಚು ಹಣ ಇಟ್ಟುಕೊಂಡು ಬನ್ನಿ. ಒಂದು ಕಪ್ ಟೀ ಕುಡಿದರೆ ಅದರ ಮೂಲಬೆಲೆಗಿಂತ ಎರಡೂವರೆ ಪಟ್ಟು ಸರ್ವೀಸ್ ಟ್ಯಾಕ್ಸ್ (ಸೇವಾ ತೆರಿಗೆ) ಕಟ್ಟಬೇಕಾಗುತ್ತದೆ. ಅಂದರೆ, ಐಶಾರಾಮಿ ರೈಲುಗಳಲ್ಲಿ ಟೀ ಬೆಲೆ 20 ರೂಪಾಯಿ ಇದ್ದರೆ, ಅದಕ್ಕೆ ಬರೋಬ್ಬರಿ 50 ರೂಪಾಯಿಗಳ ಸೇವಾ ತೆರಿಗೆಯನ್ನು ಕಟ್ಟಬೇಕು. ಅಂದರೆ ಒಂದು ಟೀಗೆ ನೀವು 70 ರೂಪಾಯಿಗಳನ್ನು ಪವಾತಿಸಬೇಕು. ಹೌದು, ಹೌಹಾರಬೇಡಿ. ಈ ರೀತಿಯ ಹಣ ವಸೂಲಿಯಾಗುತ್ತಿರುವುದು ಸತ್ಯದ ಸಂಗತಿ. ಪ್ರಯಾಣಿಕರೊಬ್ಬರು ದೆಹಲಿಯಿಂದ ಭೋಪಾಲ್ ಗೆ ಸಂಚರಿಸುವ ಭೋಪಾಲ್ ಶತಾಬ್ಧಿ ರೈಲಿನಲ್ಲಿ ಜೂನ್ 28 ರಂದು ಪ್ರಯಾಣ ಮಾಡುವ ವೇಳೆ ಟೀಗೆ ಆರ್ಡರ್ ಮಾಡಿದ್ದಾರೆ. ಟೀ ಬಿಲ್ ನಲ್ಲಿ ಟೀನ ಬೆಲೆ 20 ರೂಪಾಯಿ ಮತ್ತು ತೆರಿಗೆ 50 ರೂಪಾಯಿ ಎಂದು ನಮೂದಾಗಿದ್ದು ನೋಡಿ ಬೆಚ್ಚಿ ಬಿದ್ದಿದ್ದಾರೆ. ಟೀ ಕುಡಿದಾಗಿತ್ತು. 70 ರೂಪಾಯಿ ಪಾವತಿಸುವುದು ಅನಿವಾರ್ಯವಾಗಿತ್ತು. ಈ ಟೀ ಬಿಲ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು ಪ್ರಯಾಣಿಕರನ್ನು ಲೂಟಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅನೇಕ ಪ್ರಯಾಣಿಕರಿಂದ ದೂರುಗಳು ಬಂದಾಗ್ಯೂ ಐ ಆರ್ ಸಿ ಟಿ ಸಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆಯು ರಾಜಧಾನಿ ಅಥವಾ ಶತಾಬ್ಧಿ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೇಟರಿಂಗ್ ಸರ್ವೀಸ್ ನೀಡಲು 50 ರೂಪಾಯಿಗಳ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ. ಈ ಬಗ್ಗೆ 2018 ರಲ್ಲೇ ಅಧಿಸೂಚನೆ ಹೊರ ಬಿದ್ದಿದೆ. ಪ್ರಯಾಣಿಕರು ಊಟ, ತಿಂಡಿ, ತಿನಿಸು, ಟೀ ಅಥವಾ ಕಾಫಿಯನ್ನು ಆರ್ಡರ್ ಮಾಡಿದರೂ ಸಹ 50 ರೂಪಾಯಿ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ ಎಂದು ಹೇಳಿದೆ. ಆದಾಗ್ಯೂ, 20 ರೂಪಾಯಿಯ ಟೀಗೆ 50 ರೂಪಾಯಿ ತೆರಿಗೆ ವಿಧಿಸುವುದು ಯಾವ ನ್ಯಾಯ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.