ಚಪ್ಪಲಿಯಲ್ಲಿ 69.40 ಲಕ್ಷ ಮೌಲ್ಯದ ಚಿನ್ನದ ಗಟ್ಟಿಯನ್ನು ಕಳ್ಳಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಹಿಡಿದಿದ್ದಾರೆ.
“ಇಂಡಿಗೋ ಏರ್‌ವೇಸ್ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ ಈ ಪ್ರಯಾಣಿಕರನ್ನು ಚೆಕಿಂಗ್‌ಗೆಂದು ತಡೆದು ನಿಲ್ಲಿಸಲಾಯಿತು. ಸ್ಲಿಪ್ಪರ್‌ಗಳ ಕ್ಯಾವಿಟಿಯಲ್ಲಿ ಅಡಗಿಸಿಟ್ಟಿದ್ದ ನಾಲ್ಕು ಚಿನ್ನದ ಗಟ್ಟಿಗಳನ್ನು ಅವರಿಂದ ವಶಕ್ಕೆ ಪಡೆದಿದ್ದೇವೆ,” ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
24 ಕ್ಯಾರೆಟ್ ಶುದ್ಧವಾಗಿರುವ 1.2 ಕೆಜಿ ಚಿನ್ನವನ್ನು ಈ ವೇಳೆ ವಶಕ್ಕೆ ಪಡೆಯಲಾಗಿದೆ.
ಮಾರ್ಚ್ 12ರಂದು ಈ ಘಟನೆ ನಡೆದಿದೆ. ಇಂಡಿಗೋ ವಿಮಾನ 6ಇ 76ನಲ್ಲಿ ಪ್ರಯಾಣಿಸುತ್ತಿದ್ದ ಈ ಪ್ರಯಾಣಿಕನನ್ನು ಅನುಮಾನದ ಮೇಲೆ ತಡೆದು ನಿಲ್ಲಿಸಿ ಪ್ರಶ್ನಿಸಿದಾಗ ತಾನು ಬ್ಯಾಂಕಾಕ್‌ಗೆ ವೈದ್ಯಕೀಯ ಕಾರಣಕ್ಕೆ ತೆರಳಿದ್ದಾಗಿ ತಿಳಿಸಿದ್ದಾನೆ. ಆದರೆ ಈ ಸಂಬಂಧ ಯಾವುದೇ ಪುರಾವೆ ಕೊಡಲು ಆತ ವಿಫಲನಾಗಿದ್ದಾನೆ.
ಇದಾದ ಬಳಿಕ ಈತನನ್ನು ತೀವ್ರ ತಪಾಸಣೆಗೆ ಒಳಪಡಿಸಿ, ಬ್ಯಾಗ್ ಹಾಗೂ ಚಪ್ಪಲಿಗಳನ್ನೂ ಶೋಧಿಸಿದ ವೇಳೆ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ.