
ಬೆಂಗಳೂರು: ಹೊಸ ವರ್ಷಾಚರಣೆಗೆ ನಾಳೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷದ ಸಂಭ್ರಮದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಒಂದು ಕಡೆ ಸೇರುವಂತಿಲ್ಲ. ಸಾರ್ವಜನಿಕ ಪಾರ್ಟಿಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಜನ ಒಂದೆಡೆ ಸೇರಿದರೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಪಾರ್ಟಿಯ ವೇಳೆ ಜನರನ್ನು ಕಂಟ್ರೋಲ್ ಮಾಡುವುದು ಕಷ್ಟ. ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿಗಳಿಗೆ ಅವಕಾಶ ಇಲ್ಲ. ಈಗಾಗಲೇ ಪೊಲೀಸ್ ಆಯುಕ್ತರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.