ತಮಿಳುನಾಡಿನ ಚೆನ್ನೈನಲ್ಲಿ ಭಾರೀ ಮಳೆಯಾಗ್ತಿದೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಚೆನ್ನೈನ ಕೆಲವು ಭಾಗಗಳು ಶುಕ್ರವಾರ ಜಲಾವೃತವಾಗಿವೆ. ಹವಾಮಾನ ಪರಿಸ್ಥಿತಿಯ ದೃಷ್ಟಿಯಿಂದ ತಮಿಳುನಾಡು ಮತ್ತು ಪುದುಚೇರಿಯ 14 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಹವಾಮಾನ ಇಲಾಖೆಯು ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಚೆನ್ನೈನಲ್ಲಿ 169 ಸೇರಿದಂತೆ 5,093 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದಾರೆ.
ರಸ್ತೆಯ ತುಂಬೆಲ್ಲಾ ಮಳೆನೀರು ತುಂಬಿರೋದ್ರಿಂದ ವಾಹನಗಳ ಸುಗಮ ಸಂಚಾರಕ್ಕೆ ಕಷ್ಟವಾಗ್ತಿದೆ. ಪ್ರತಿನಿತ್ಯದ ಅಗತ್ಯ ವಸ್ತುಗಳನ್ನು ಪಡೆಯಲು ನಿವಾಸಿಗಳು ಪರದಾಡುತ್ತಿದ್ದಾರೆ.
ಕೇಂದ್ರ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ 2,000 ಕ್ಕೂ ಹೆಚ್ಚು ಪರಿಹಾರ ಸಿಬ್ಬಂದಿ ತುರ್ತು ಕಾರ್ಯಾಚರಣೆಗೆ ಸಿದ್ಧರಾಗಿದ್ದಾರೆ.
ರಾತ್ರಿಯ ಮಳೆಯು ನಗರದ ಉತ್ತರ ಭಾಗವನ್ನು ಮುಳುಗಿಸಿದರೆ, ಟಿ-ನಗರ ಮತ್ತು ವೆಲಚೇರಿ ಸೇರಿದಂತೆ ಅದರ ದಕ್ಷಿಣ ಮತ್ತು ಮಧ್ಯ ಭಾಗಗಳು ನೀರಿನಲ್ಲಿ ಮುಳುಗಿವೆ.
ಚೆನ್ನೈ ಹೊರತುಪಡಿಸಿ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು, ರಾಣಿಪೇಟ್, ವೆಲ್ಲೂರು, ಸೇಲಂ, ನಾಮಕ್ಕಲ್, ತಿರುವಣ್ಣಾಮಲೈ, ಕಲ್ಲಕುರಿಚಿ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ತಿರುವಳ್ಳೂರು, ಕಾಂಚೀಪುರಂ ಮತ್ತು ರಾಣಿಪೇಟ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಚೆನ್ನೈ, ಚೆಂಗಲ್ಪಟ್ಟು, ವಿಲ್ಲುಪುರಂ, ಕಲ್ಲಕುರಿಚಿ ಮತ್ತು ಡೆಲ್ಟಾ ಪ್ರದೇಶದ ಇತರ ಜಿಲ್ಲೆಗಳು ಭಾರೀ ಮಳೆಯಿಂದ ತತ್ತರಿಸುತ್ತಿವೆ.