ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವಂತಿಲ್ಲ ಎಂದು ಈ ಹಿಂದೆ ಹೇರಲಾಗಿದ್ದ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಹಿಂಪಡೆದುಕೊಂಡಿದೆ. ಇದರಿಂದಾಗಿ ಸರ್ಕಾರಿ ನೌಕರರು ಆರ್ ಎಸ್ ಎಸ್ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಬಹುದಾಗಿದೆ.
ಈ ಕುರಿತಂತೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು ಎಂದು ನಿಷೇಧಿಸಲಾದ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಿರುವುದು ತಪ್ಪು ಎಂಬ ಸಂಗತಿಯನ್ನು ಅರಿಯಲು ಕೇಂದ್ರ ಸರ್ಕಾರಕ್ಕೆ ಐದು ದಶಕ ಬೇಕಾಯಿತು ಎಂದು ಹೇಳಿದೆ.
ನಿವೃತ್ತ ಕೇಂದ್ರ ಸರ್ಕಾರಿ ನೌಕರ ಪುರುಷೋತ್ತಮ್ ಗುಪ್ತಾ, ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಐದು ದಶಕಗಳ ಹಿಂದೆ ಹೇರಲಾಗಿದ್ದ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಲೇವಾರಿ ಮಾಡುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಶುಶ್ರುತಾ ಅರವಿಂದ್ ದರ್ಮಾಧಿಕಾರಿ ಮತ್ತು ಗಜೇಂದ್ರ ಸಿಂಗ್ ಅವರಿದ್ದ ಪೀಠವು ಈ ಮಹತ್ವದ ಹೇಳಿಕೆ ನೀಡಿದೆ.