ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಚ್ಚಾಡಿಯನ್ ಸಿನಿಮಾಗೆ ಸಂಬಂಧಿಸಿದಂತೆ ಅವರ ವಿರುದ್ಧದ ಫೋರ್ಜರಿ ಪ್ರಕರಣವನ್ನು ಮುಂದುವರಿಸಲು ಅಧೀನ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಈ ಹಿಂದೆ ಲತಾ ರಜನಿಕಾಂತ್ ಅವರ ವಿರುದ್ಧ ಫೋರ್ಜರಿ, ಸುಳ್ಳು ಹೇಳಿಕೆ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಲಾಗಿದ್ದು, ಇದನ್ನು ರದ್ದುಪಡಿಸುವಂತೆ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಸುಳ್ಳು ಹೇಳಿಕೆ ಮತ್ತು ವಂಚನೆ ಪ್ರಕರಣವನ್ನು ರದ್ದುಗೊಳಿಸಿದ್ದು, ಫೋರ್ಜರಿ ಪ್ರಕರಣವನ್ನು ಮುಂದುವರಿಸಲು ಮ್ಯಾಜಿಸ್ಟ್ರೇಟ್ ಕೋರ್ಟಿಗೆ ನಿರ್ದೇಶಿಸಿದೆ.
ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ‘ಕೊಚ್ಚಾಡಿಯನ್’ ಚಿತ್ರವನ್ನು ನಿರ್ದೇಶಿಸಿದ್ದು, ಆದರೆ ಈ ಚಿತ್ರ ತೀವ್ರ ನಷ್ಟವನ್ನು ಅನುಭವಿಸಿತ್ತು. ಈ ಸಂದರ್ಭದಲ್ಲಿ ಮೀಡಿಯಾ ಒನ್ ಕಂಪನಿ ಪರ ಲತಾ ರಜನಿಕಾಂತ್ ಭದ್ರತಾ ಖಾತರಿ ನೀಡಿದ್ದು, ಆದರೂ ನಮಗೆ ನಷ್ಟ ಪರಿಹಾರ ತುಂಬಿ ಕೊಟ್ಟಿಲ್ಲ ಎಂದು ಆಡ್ ಬ್ಯುರೋ ಕಂಪನಿ ನ್ಯಾಯಾಲಯದ ಮೆಟ್ಟಿಲೇರಿತ್ತು.