ಆಂಧ್ರ ಪ್ರದೇಶದ ಗ್ರಾಮವೊಂದರ ಹುಂಜಗಳು ತಮ್ಮ ವಿಶಿಷ್ಟ ರೀತಿಯ ಮೂತಿಗಳಿಂದ ರಾಷ್ಟ್ರೀಯ ಕುಕ್ಕಟ ಸೌಂದರ್ಯ ಸ್ಫರ್ಧೆಯಲ್ಲಿ ಎಲ್ಲರ ಗಮನ ಸೆಳೆದಿವೆ.
ಪ್ರಕಾಶಂ ಜಿಲ್ಲೆಯ ಕೊಮರೋಲು ಮಂಡಲದ ರಾಜುಪಾಳೆಂ ಎಂಬ ಗ್ರಾಮದ ಸಯ್ಯದ್ ಬಾಷಾ ತಮಿಳು ನಾಡು ಹಾಗೂ ಕೇರಳದಲ್ಲಿರುವ ಗಿಣಿ ಮೂತಿಯ ಹುಂಜಗಳ ಬಗ್ಗೆ ಕೇಳಿದ್ದರು. ಈ ಹುಂಜಗಳನ್ನು ಸಾಕುವ ಮೂಲಕ ಆದಾಯದ ಮೂಲ ಹೊಂದಿಸಿಕೊಳ್ಳುವ ಆಲೋಚನೆ ಅವರಿಗೆ ಹೊಳೆಯಿತು. ಕೂಡಲೇ ತಮ್ಮ ತಂದೆಯೊಂದಿಗೆ ಈ ಹುಂಜಗಳ ಸಾಕಣಿಕೆಗೆ ಇಳಿದರು ಸಯ್ಯದ್ ಬಾಷಾ.
ಕಳೆದ ನಾಲ್ಕು ವರ್ಷಗಳಿಂದಲೂ ಈ ಹುಂಜಗಳ ಸಾಕಣಿಕೆಯಲ್ಲಿ ಭಾಗಿಯಾಗಿದ್ದಾರೆ ಬಾಷಾ ಮತ್ತವರ ತಂದೆ. ಸೌಂದರ್ಯ ಸ್ಫರ್ಧೆಯಲ್ಲಿ ತಮ್ಮ ಹುಂಜವನ್ನು ಪ್ರದರ್ಶಿಸಲೆಂದು ಅದಕ್ಕೆ ವಿಶೇಷ ಪೋಷಕಾಂಶಗಳುಳ್ಳ ಪಥ್ಯ ಹಾಗೂ ಆರೈಕೆ ಮಾಡಿದ್ದಾರೆ ಬಾಷಾ.
ಹುಂಜಗಳ ಗಾತ್ರ, ಆಕಾರ, ಬಣ್ಣ ಹಾಗೂ ರೆಕ್ಕೆಗಳ ಶಕ್ತಿಯ ಆಧಾರದ ಮೇಲೆ ಅವುಗಳನ್ನು ಸೌಂದರ್ಯ ಸ್ಫರ್ಧೆಗೆ ಪರಿಗಣಿಸಲಾಗುತ್ತದೆ. ಅನಂತಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮಟ್ಟದ ಕುಕ್ಕಟ ಸೌಂದರ್ಯ ಸ್ಪರ್ಧೆಯಲ್ಲಿ ಬಾಷಾರ ಹುಂಜ ನಾಲ್ಕನೇ ಸ್ಥಾನ ಪಡೆದಿದೆಯಂತೆ.
50 ಹುಂಜಗಳನ್ನು ಸಾಕುತ್ತಿರುವ ಬಾಷಾ, ತಮಿಳುನಾಡಿನಲ್ಲಿ ಆಯೋಜಿಸಲಾಗುವ ಮುಂದಿನ ಬಾರಿಯ ಕುಕ್ಕಟ ಸೌಂದರ್ಯ ಸ್ಫರ್ಧೆಯಲ್ಲಿ ಭಾಗವಹಿಸಲು ತಮ್ಮ ಹುಂಜಗಳನ್ನು ಸಜ್ಜುಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.