ರಾಮನಗರ: ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿದ ಅಪರಾಧಿಗಳು ವಿವಿಧ ಕಾರಣ ನೀಡಿ ಪೆರೋಲ್ ಮೇಲೆ ಹೊರಬರುವುದು ಸಾಮಾನ್ಯವಾಗಿದೆ.
ಆದರೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ವ್ಯಕ್ತಿಯೊಬ್ಬನಿಗೆ ಕೃಷಿ ಮಾಡಲು 90 ದಿನಗಳ ಪೆರೋಲ್ ನೀಡುವ ಮೂಲಕ ಹೈಕೋರ್ಟ್ ಕೃಷಿಯ ಮಹತ್ವವನ್ನು ಸಾರಿ ಹೇಳಿದೆ. ರಾಮನಗರ ಜಿಲ್ಲೆ ಕನಕಪುರ ಸಿಡಿದೇವರಹಳ್ಳಿಯ ಚಂದ್ರ ಹೈಕೋರ್ಟ್ ನಿಂದ ಪೆರೋಲ್ ಪಡೆದುಕೊಂಡ ವ್ಯಕ್ತಿಯಾಗಿದ್ದಾರೆ.
ಕೊಲೆ ಪ್ರಕರಣದಲ್ಲಿ 11 ವರ್ಷಗಳಿಂದ ಜೈಲಿನಲ್ಲಿರುವ ಚಂದ್ರ, ತನ್ನ ತಂದೆಗೆ 78 ವರ್ಷವಾಗಿದ್ದು, ಬೇಸಾಯ ಮಾಡಲು ಹಿಂದಿನಂತೆ ಸಾಧ್ಯವಾಗುತ್ತಿಲ್ಲ. ಕೃಷಿ ಚಟುವಟಿಕೆ ಕೈಗೊಳ್ಳಲು ನನ್ನನ್ನು ಬಿಟ್ಟರೆ ಮನೆಯಲ್ಲಿ ಯಾರೂ ಇಲ್ಲ. ಹೀಗಾಗಿ ಪೆರೋಲ್ ನೀಡಬೇಕು ಎಂದು ಪರಪ್ಪನ ಅಗ್ರಹಾರ ಜೈಲು ಅಧೀಕ್ಷರಿಗೆ ಮನವಿ ಮಾಡಿದ್ದ. 2023ರ ಸೆಪ್ಟೆಂಬರ್ 23ರಂದು ಆತನ ಮನವಿಯನ್ನು ಜೈಲು ಅಧೀಕ್ಷಕರು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಚಂದ್ರ ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಕೃಷಿ ಕಾರ್ಯ ಕೈಗೊಳ್ಳಲು 90 ದಿನಗಳ ಪೆರೋಲ್ ಮಂಜೂರು ಮಾಡಿದೆ.