ನವದೆಹಲಿ: ವಿವಾಹಿತರ ಅಕ್ರಮ ಸಂಬಂಧ ಅಪರಾಧ ಎಂದು ಪರಿಗಣಿಸುವ ಕಾನೂನನ್ನು ಮರು ಜಾರಿ ಮಾಡುವುದು, ಪುರುಷರು –ಮಹಿಳೆಯರು, ತೃತೀಯ ಲಿಂಗಿಗಳ ನಡುವೆ ಸಮ್ಮತಿ ಇಲ್ಲದ ಲೈಂಗಿಕತೆ ಅಪರಾಧವೆಂದು ಪರಿಗಣಿಸುವ ಬಗ್ಗೆ ಸಂಸದೀಯ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿದೆ.
ಬ್ರಿಟಿಷ್ ಕಾಲದ ಕಾನೂನುಗಳ ಮರುಪರಿಶೀಲಿಸುವ ಕ್ರಮದ ಭಾಗವಾಗಿ ಈ ಶಿಫಾರಸು ಮಾಡಲಾಗುವುದು. ಅಕ್ರಮ ಸಂಬಂಧವನ್ನು ಅಪರಾಧ ವ್ಯಾಪ್ತಿಗೆ ತರಲು, ಜೈಲು ಶಿಕ್ಷೆ ವಿಧಿಸಲು ಶಿಫಾರಸು ಮಾಡಲಾಗುವುದು. ಪುರುಷ ಮತ್ತು ಮಹಿಳೆ ಇಬ್ಬರಿಗೂ ಶಿಕ್ಷೆ ನೀಡುವ ಬಗ್ಗೆ ಸಂಸತ್ ಸ್ಥಾಯಿ ಸಮಿತಿ ವರದಿ ಸಲ್ಲಿಸಲಿದೆ ಎಂದು ಹೇಳಲಾಗಿದೆ.
ಅಕ್ರಮ ಸಂಬಂಧ ಮತ್ತು ಸಮ್ಮತವಲ್ಲದ ಸಲಿಂಗ ಕಾಮ ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶಗಳನ್ನು ತಿರಸ್ಕರಿಸಿ ಇವುಗಳನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವಂತೆ ಸಂಸತ್ತಿನ ಸ್ಥಾಯಿ ಸಮಿತಿ ಶಿಫಾರಸು ಮಾಡುವ ಸಾಧ್ಯತೆ ಇದೆ.
ಬದಲಾದ ಕಾಲಕ್ಕೆ ತಕ್ಕಂತೆ ಹೊಸ ಕಾನೂನು ರೂಪಿಸುವ ಸಲುವಾಗಿ ಕೇಂದ್ರ ಸಚಿವಾಲಯ ಐಪಿಸಿ ಬದಲಿಗೆ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆ ಬದಲಿಗೆ ಭಾರತೀಯ ಸಾಕ್ಷ್ಯ ಅಧಿನಿಯಮ ರೂಪಿಸುವ ಮಸೂದೆಗಳನ್ನು ಕೆಲವು ತಿಂಗಳ ಹಿಂದೆ ಸಂಸತ್ತಿನಲ್ಲಿ ಮಂಡಿಸಿದ್ದು, ಈ ಮಸೂದೆಯನ್ನು ಹೆಚ್ಚಿನ ಪರಿಶೀಲನೆಗಾಗಿ ಗೃಹ ವ್ಯವಹಾರಗಳ ಕುರಿತಾದ ಸ್ಥಾಯಿ ಸಮಿತಿಗೆ ವರ್ಗಾವಣೆ ಮಾಡಲಾಗಿದೆ.
ಬ್ರಿಟಿಷರ ಕಾಲದಿಂದಲೂ ಭಾರತದಲ್ಲಿ ಅಕ್ರಮ ಸಂಬಂಧ ಅಪರಾಧವಾಗಿತ್ತು. ಪತಿಯ ಒಪ್ಪಿಗೆ ಇಲ್ಲದೆ ಆತನ ಪತ್ನಿಯೊಂದಿಗೆ ಸಂಬಂಧ ಬೆಳೆಸುವುದು ಅಕ್ರಮವಾಗಿ ಅಕ್ರಮ ಸಂಬಂಧದಲ್ಲಿ ತೊಡಗಿದವರಿಗೆ ಐಪಿಸಿ ಸೆಕ್ಷನ್ 497ರ ಅಡಿ ಶಿಕ್ಷೆ ನೀಡಲಾಗುತ್ತಿತ್ತು. ಇಂತಹ ಪ್ರಕರಣಗಳಲ್ಲಿ ಪುರುಷನಿಗೆ ಮಾತ್ರ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ 2018ರಲ್ಲಿ ಸುಪ್ರೀಂಕೋರ್ಟ್ ಅಕ್ರಮ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದು ಹೇಳಿದೆ. ಈಗ ಅಕ್ರಮ ಸಂಬಂಧವನ್ನು ಮತ್ತೆ ಅಪರಾಧ ಎಂದು ಪರಿಗಣಿಸಲು ಸಂಸದೀಯ ಸಮಿತಿ ಒಲವು ತೋರಿದೆ. ಅಕ್ರಮ ಸಂಬಂಧದಲ್ಲಿ ತೊಡಗುವ ಪುರುಷ ಮಹಿಳೆಯರಿಗೆ ಶಿಕ್ಷೆ ವಿಧಿಸಲು ಸಲಹೆ ನೀಡಲಿದೆ ಎನ್ನಲಾಗಿದೆ.