ಪೊಲೀಸ್ ಪಡೆಗಳಲ್ಲಿ ಲಿಂಗಾಧರಿತ ವ್ಯತ್ಯಾಸಗಳನ್ನು ಗಮನಿಸಿ, ಪ್ರತಿ ಜಿಲ್ಲೆಯಲ್ಲೂ ಮಹಿಳಾ ಪೊಲೀಸ್ ಠಾಣೆಯನ್ನು ಹೊಂದಿರಬೇಕು ಎಂದು ಸಂಸದೀಯ ಸಮಿತಿ ಸಲಹೆ ನೀಡಿದೆ.
ಸಮಿತಿಯ ಅವಲೋಕನಗಳ ಆಧಾರದ ಮೇಲೆ, ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಪೊಲೀಸ್ ಪಡೆಯಲ್ಲಿ ಮಹಿಳೆಯರು ಕೇವಲ 10.3 ಪ್ರತಿಶತದಷ್ಟು ಪ್ರತಿನಿಧಿಸಿದ್ದಾರೆ ಎಂದು ತಿಳಿದು ಬರುತ್ತದೆ.
ಮಹಿಳೆಯರ ಸಬಲೀಕರಣದ ಕುರಿತು ಮಾತನಾಡಿದ ಗೃಹ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿ; ಪೊಲೀಸ್ ಪಡೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇಕಡಾ 33ಕ್ಕೆ ಏರಿಸಲು ಮಾರ್ಗಸೂಚಿಯನ್ನು ರೂಪಿಸಬೇಕು ಎಂದಿದೆ.
ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ನೇತೃತ್ವದ ಸಮಿತಿಯು ಸಲ್ಲಿಸಿದ ವರದಿಯಲ್ಲಿ, “ಪೊಲೀಸ್ ಪಡೆಯಲ್ಲಿ ಮಹಿಳೆಯರು ಕೇವಲ 10.3 ಪ್ರತಿಶತದಷ್ಟು ಪ್ರತಿನಿಧಿಸುವ ಮೂಲಕ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಎಂಬುದನ್ನು ಸಮಿತಿಯು ಗಮನಿಸಿದೆ” ಎಂದು ಹೇಳಿದೆ.
ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸಲಹೆ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಪುರುಷ ಕಾನ್ ಸ್ಟೇಬಲ್‌ಗಳ ಖಾಲಿ ಹುದ್ದೆಗಳನ್ನು ಪರಿವರ್ತಿಸುವ ಬದಲು ಹೆಚ್ಚುವರಿ ಹುದ್ದೆಗಳನ್ನು ಪರಿಚಯಿಸುವ ಮೂಲಕ ಮಹಿಳೆಯರನ್ನು ಪೊಲೀಸ್ ಪಡೆಗೆ ಸೇರಿಸಬೇಕು ಎಂದು ಸಮಿತಿ ಹೇಳಿದೆ. ಇದರಿಂದ ದೇಶದಲ್ಲಿ ಪೊಲೀಸ್-ಜನಸಂಖ್ಯಾ ಅನುಪಾತ ಸುಧಾರಿಸುತ್ತದೆ ಎಂದು ಸಮಿತಿ ತಿಳಿಸಿದೆ.
“ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ, ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಮುಂಚೂಣಿ ಪಾತ್ರಗಳನ್ನು ನಿಯೋಜಿಸಲಾಗುತ್ತಿರುವ ರಕ್ಷಣಾ ಪಡೆಗಳಿಂದ ಸೂಚನೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಪೊಲೀಸರಿಗೆ ಪ್ರಮುಖವಾದ ಹಾಗೂ ಸವಾಲಿನ ಕರ್ತವ್ಯಗಳನ್ನು ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಸಚಿವಾಲಯ ಸಲಹೆ ನೀಡಬಹುದು,” ಎಂದು ಸಮಿತಿ ಮುಂದುವರೆದು ತಿಳಿಸಿದೆ.
ಸಂಸದೀಯ ಸಮಿತಿಯ ಪ್ರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕನಿಷ್ಠ ಮೂರು ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ಗಳು ಮತ್ತು 10 ಮಹಿಳಾ ಕಾನ್ ಸ್ಟೇಬಲ್‌ಗಳನ್ನು ಹೊಂದಿರಬೇಕು. ಮಹಿಳಾ ಸಹಾಯವಾಣಿಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಬಿಪಿಆರ್&ಡಿ ಸಹಾಯ ಮಾಡುತ್ತದೆ ಎಂದು ಸಮಿತಿ ಶಿಫಾರಸು ಮಾಡಿದೆ.