ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆ ಸಜ್ಜಾಗಿದೆ. ಕೃಷಿ ಕಾಯ್ದೆ ತಿದ್ದುಪಡಿ ಮಸೂದೆ ರದ್ದು ಮಾಡುವ ಬಗ್ಗೆ ಇಂದು ಲೋಕಸಭೆಯಲ್ಲಿ ಮಸೂದೆ ಮಂಡನೆ ಮಾಡಲಾಗುವುದು.
ಈ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಆಗ್ರಹಿಸಿದ್ದು, ಕೃಷಿ ಕಾನೂನುಗಳ ಪ್ರತಿಭಟನೆಯ ವೇಳೆ ಪ್ರಾಣ ಕಳೆದುಕೊಂಡ ರೈತರ ದಾಖಲೆ ರಚಿಸಬೇಕು ಮತ್ತು ಅವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್ ಅವರ ಕೂಡ ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು. ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಸಾವು ಕಂಡ 700 ರೈತರ ಕುಟುಂಬಗಳಿಗೆ ಪರಿಹಾರ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಸಿಪಿಎಂ ಸಂಸದ ಬಿನೊಯ್ ವಿಸ್ವಂ ಅವರು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.