ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನ ಸೆಪ್ಟೆಂಬರ್ 18 ರಂದು ಹಳೆಯ ಕಟ್ಟಡದಲ್ಲಿ ನಡೆಯಲಿದೆ. ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯಂದು ಅಧಿವೇಶನವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಲಾಗಿದೆ.
5 ದಿನಗಳ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮತ್ತು ‘ಒಂದು ರಾಷ್ಟ್ರ-ಒಂದು ಚುನಾವಣೆ’ ಮಸೂದೆಗಳನ್ನು ಪರಿಚಯಿಸಲಾಗುವುದು ಎಂದು ವರದಿಯಾಗಿದೆ. ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನವನ್ನು ಸೆಪ್ಟೆಂಬರ್ 18-22 ರವರೆಗೆ ಕರೆದಿದ್ದು, ಅಧಿವೇಶನದ ಕಾರ್ಯಸೂಚಿಯನ್ನು ಶೀಘ್ರದಲ್ಲೇ ಸಾರ್ವಜನಿಕಗೊಳಿಸಲಾಗುವುದು.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 1 ರಂದು ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಿದರು. ಅದೇ ದಿನ ಸ್ಪೀಕರ್ ಪೀಠದ ಬಳಿ ಐತಿಹಾಸಿಕ ‘ಸೆಂಗೊಲ್’ ಅನ್ನು ಸ್ಥಾಪಿಸಲಾಯಿತು.