ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಜುಲೈ 22 ರಿಂದ ಆರಂಭವಾಗಲಿದ್ದು, ಆಗಸ್ಟ್ 12ರವರೆಗೂ ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23 ರಂದು ಕೇಂದ್ರ ಸರ್ಕಾರದ 2024- 25 ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ.
ಅಧಿವೇಶನದ ಮೊದಲ ದಿನವಾದ ಸೋಮವಾರ ಆರ್ಥಿಕ ಸಮೀಕ್ಷಾ ವರದಿಯನ್ನು ನಿರ್ಮಲಾ ಸೀತಾರಾಮನ್ ಮಂಡಿಸುವರು. ಮುಂಗಾರು ಅಧಿವೇಶನದಲ್ಲಿ ಒಟ್ಟು ಆರು ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. 1934ರ ಏರ್ ಕ್ರಾಫ್ಟ್ ಕಾಯ್ದೆ ರದ್ದುಪಡಿಸಿ ಹೊಸ ಕಾಯ್ದೆ ತರಲು ಭಾರತೀಯ ವಾಯುಯಾನ ವಿಧೇಯಕ ಮಂಡಿಸಲಾಗುವುದು. 2024ನೇ ಸಾಲಿನ ಹಣಕಾಸು ಮಸೂದೆ, ಸ್ವಾತಂತ್ರ್ಯ ಪೂರ್ವಕ್ಕಿಂತ ಹಳೆಯ ಕಾಯ್ದೆಯನ್ನು ಬದಲಿಸಲು ಬಾಯ್ಲರ್ಸ್ ಮಸೂದೆ, ಕಾಫಿ ಮಸೂದೆ, ರಬ್ಬರ್ ಮಸೂದೆ, ವಿಪತ್ತು ನಿರ್ವಹಣೆ ತಿದ್ದುಪಡಿ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲು ತೀರ್ಮಾನಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿದ್ದರು. ನಂತರ ಲೋಕಸಭೆ ಚುನಾವಣೆ ನಡೆದು ಹೊಸ ಸರ್ಕಾರ ಬಂದಿರುವುದರಿಂದ ಮಂಗಳವಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ.