ನವದೆಹಲಿ: ಸಂಸತ್ ನಲ್ಲಿ ಭಾರಿ ಭದ್ರತಾ ಲೋಪ ಪ್ರಶ್ನಿಸಿ ಸಂಸತ್ ಕಲಾಪಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ರಾಜ್ಯ ಸಭೆಯ ವಿಪಕ್ಷ ಸಂಸದರನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿದ ಘಟನೆ ನಡೆದಿದೆ.
ಸಂಸತ್ ನಲ್ಲಿ ಭದ್ರತಾ ಲೋಪ ಪ್ರಕರಣ ಖಂಡಿಸಿ ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡುವಂತೆ ಆಗ್ರಹಿಸಿದರು. ವಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಗಲಾಟೆ-ಕೋಲಾಹಲ ಆರಂಭವಾಯಿತು. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕಾಂಗ್ರೆಸ್ ಸಂಸದರು ಸೇರಿದಂತೆ 34 ಸಂಸದರನ್ನು ಸಂಸತ್ ಅಧಿವೇಶನದಿಂದ ಅಮಾನತುಗೊಳಿಸಲಾಯಿತು.
ರಾಜ್ಯಸಭೆ ಸದಸ್ಯರಾದ ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೆವಾಲಾ ಸೇರಿದಂತೆ ವಿಪಕ್ಷಗಳ ಒಟ್ಟು 34 ಸಂಸದರನ್ನು ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಯಿತು.
ಇದೇ ವೇಳೆ ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಲೋಕಸಭೆಯ 33 ಸಂಸದರನ್ನು ಅಮಾನತುಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.