ನವದೆಹಲಿ: ಬಾಲಾಪರಾಧಿಗಳ ವಯೋಮಿತಿಯನ್ನು 16 ವರ್ಷಕ್ಕೆ ಇಳಿಕೆ ಮಾಡುವುದು ಬೇಡವೆಂದು ಗೃಹ ಖಾತೆ ವ್ಯವಹಾರಗಳ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬಾಲಾಪರಾಧಿಗಳು ಎಂದು ಗುರುತಿಸಲು ನಿಗದಿಪಡಿಸಿದ 18 ವರ್ಷದ ವಯೋಮಿತಿಯನ್ನು 16 ವರ್ಷಕ್ಕೆ ಇಳಿಸಬೇಕಾದ ಅನಿವಾರ್ಯತೆಯಿಲ್ಲ. 18 ವರ್ಷದವರನ್ನು ಶಿಕ್ಷಿಸಲು ಪೋಕ್ಸೋ ಕಾಯ್ದೆ ಪ್ರಬಲವಾಗಿದೆ ಎಂದು ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ.
ಪೋಕ್ಸೋ ಕಾಯ್ದೆ ಅಡಿಯಲ್ಲಿ ಗಂಭೀರ ಸ್ವರೂಪದ ಅಪರಾಧ ಕೃತ್ಯವೆಸಗಿದ ಬಾಲಾಪರಾಧಿಗಳ ವಯೋಮಿತಿಯನ್ನು 18 ವರ್ಷದಿಂದ 16 ವರ್ಷಕ್ಕೆ ಇಳಿಕೆ ಮಾಡುವುದು ಬೇಡವೆಂದು ಹೇಳಲಾಗಿದೆ. 18 ವರ್ಷ ಆಸುಪಾಸಿನ ಮಕ್ಕಳು ಗಂಭೀರ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡಿರುವುದು ಪೋಲಿಸ್ ದಾಖಲೆಗಳಿಂದ ಗೊತ್ತಾಗಿದೆ. ಇಂತಹ ಸಂದರ್ಭದಲ್ಲಿ ಬಾಲಾಪರಾಧಿಗಳ ವಯೋಮಿತಿ ಸಡಿಲಿಕೆ ಮಾಡುವುದು ಸರಿಯಲ್ಲ. ಸಡಿಲಿಕೆ ಮಾಡಿದಲ್ಲಿ ಅಪರಾಧಿಗಳಿಗೆ ಸರಿಯಾದ ಮಾರ್ಗ ತೋರಿಸುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ. ಅತ್ಯಾಚಾರ ಪ್ರಕರಣಗಳಲ್ಲಿ 18 ವರ್ಷದೊಳಗಿನವರು ಹೆಚ್ಚಾಗಿ ಭಾಗಿಯಾಗುತ್ತಿರುವುದರಿಂದ ಬಾಲಾಪರಾಧಿ ಎಂದು ಗುರುತಿಸಲು ನಿಗದಿಪಡಿಸಿದ ವಯೋಮಿತಿ ಇಳಿಕೆ ಮಾಡಬೇಕೆಂಬ ಅಭಿಪ್ರಾಯ ಕೇಳಿಬಂದಿತ್ತು. ಮಕ್ಕಳ ಅಪರಾಧಗಳಿಗೆ 2015 ರ ಪೋಕ್ಸೋ ಕಾನೂನಿನ ಅನ್ವಯ ಶಿಕ್ಷೆ ನೀಡುತ್ತಿದ್ದು, 18 ವರ್ಷದವರನ್ನು ಕೂಡ ನಿಯಂತ್ರಿಸಲು ಕಾನೂನು ಪ್ರಬಲವಾಗಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಬಾಲಾಪರಾದಿ ವಯಸ್ಸಿನ ಮಿತಿಯನ್ನು 16 ವರ್ಷಕ್ಕೆ ಇಳಿಸುವ ಪ್ರಸ್ತಾವನೆಯನ್ನು ಕೈಬಿಡಲಾಗಿದೆ.